ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ 4ನೇ ತರಗತಿ ಬಾಲಕ – Saaksha Tv
ಚಿಕ್ಕಮಗಳೂರು: ಅಪ್ಪನ ಜೊತೆ ಜಗಳವಾಡಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.
ಚೇತನ್ (9) ಮೃತ ಬಾಲಕ. ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನ ಪೋಷಕರು ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಗ್ರಾಮದವರು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಕುಟುಂಬವು ಆಲ್ದೂರಿನ ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಾಫಿತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ಪೋಷಕರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಈ ಕುಟುಂಬವು ಆಗಾಗ್ಗೆ ರಾಣಿಬೆನ್ನೂರಿಗೆ ಹೋಗಿ ಬರುತ್ತಿತ್ತು. ಹೀಗೆ ನಾಲ್ಕು ದಿನಗಳ ಹಿಂದೆ ರಾಣಿಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಎಲ್ಲರೂ ಹೋಗಿದ್ದರು. ಈ ವೇಳೆ ಅಪ್ಪನ ಜೊತೆ ಜಗಳವಾಡಿದ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಲಕ ಚೇತನ ಓದಿನಲ್ಲಿ ಚುರುಕು ಹಾಗೂ ಸದಾ ಲವಲವಿಕೆಯಿಂದ ಇರುತ್ತಿದ್ದ. ಬಾಲಕನ ಸಾವಿಗೆ ಶಾಲೆಯ ಶಿಕ್ಷಕ ವರ್ಗ ಕೂಡ ಬೇಸರ ವ್ಯಕ್ತಪಡಿಸಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಮೃತನು ತುಸು ಸಿಟ್ಟಿನ ಬಾಲಕನಾಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆಗಾಗ್ಗೆ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದನು.








