ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆಂಬ ಆರೋಪವೊಂದು ಕೇಳಿ ಬಂದಿದೆ.
ಈ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್ನಿಂದ (Injection) ಆತಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅಜ್ಜಂಪುರ ಪಟ್ಟಣದ ಹತ್ತಿರದ ಕೆಂಚಾಪುರ ಗ್ರಾಮದ ಅಶೋಕ್ ಎಂಬುವವರ 7 ವರ್ಷದ ಮಗ ಸೋನೇಶ್ ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಹೀಗಾಗಿ ಕುಟುಂಬಸ್ಥರು ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಎಂಬುವವರ ಬಳಿ ಕರೆದುಕೊಂಡು ಹೋಗಿದ್ದರು.
ಈ ಸಂದರ್ಭದಲ್ಲಿ ವೈದ್ಯ, ಬಾಲಕ ಸೋನೇಶ್ ಅವರ ಸೊಂಟಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ಇಂಜೆಕ್ಷನ್ ಓವರ್ ಡೋಸ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಓವರ್ ಡೋಸ್ ಇಂಜೆಕ್ಷನ್ ನಿಂದ ಬಾಲಕನ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಶವ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ಬಾಲಕನ ಮೃತದೇಹ ದಾಖಲಿಸಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಡಾ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಬಾಲಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.