ಬೆಂಗಳೂರು : ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ನಾಯಂಡಹಳ್ಳಿ ಸಿಗ್ನಲ್‌ನ ಮೆಟ್ರೋ ಸ್ಟೇಷನ್ ಹತ್ತಿರ ನಡೆದಿದೆ.
ವಿಜಯನಗರ ಹತ್ತಿರ ಅತ್ತಿಗುಪ್ಪೆ ಮೂಲದ ಅನುಷಾ ಸಾವನ್ನಪ್ಪಿರುವ ಮಹಿಳೆ. ನಾಯಂಡಹಳ್ಳಿ ಸಿಗ್ನಲ್ ಬಳಿ ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅನುಷಾ ಸಾವನ್ನಪ್ಪಿದ್ದಾರೆ. ಜೊತೆಗೆ ಬೈಕ್‌ನಲ್ಲಿದ್ದ ತಾಯಿ ವನಜಾಕ್ಷಿ ಸ್ಥಿತಿ ಗಂಭೀರವಾಗಿದ್ದು, ಕಾಲು ಕಟ್ ಆಗಿದೆ. 7 ವರ್ಷದ ಮಗ ಆರ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಸ್ಥಳದಿಂದ ಮುಂದೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವಿದೆ. ಈ ಘಟನೆ ನೋಡಿದ್ದ ಬಸ್ ಚಾಲಕರೊಬ್ಬರು ಲಾರಿಗೆ ಬಸ್ ಅಡ್ಡಲಾಗಿ ನಿಲ್ಲಿಸಿದ್ದಾರೆ. ಪರಿಣಾಮ ಲಾರಿ ಚಾಲಕ, ಲಾರಿ ಬಿಟ್ಟು ಜಿಗಿದು ಓಡಿ ಹೋಗಿದ್ದಾರೆ. ಹೀಗಾಗಿ ಲಾರಿ ಕೂಡ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.








