“ಯಶಸ್ಸಿನ ಸರಳ ಸೂತ್ರಗಳು” ಪುಸ್ತಕ ಬರೆದು ತಿಳಿಸಿದ ನಟ ರಮೇಶ ಅರವಿಂದ್
ಬಹುಮುಖ ಪ್ರತಿಭೆ ನಟ ರಮೇಶ್ ಅರವಿಂದ್ ಅವರು ಬರೆದಿರುವ ”ಪ್ರೀತಿಯಿಂದ ರಮೇಶ್” ‘ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್ ನಾಗ್ ಅವರು ಬಿಡುಗಡೆ ಮಾಡಿದ್ದಾರೆ. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಪುಸ್ತಕವನ್ನ ಬೆಂಗಳೂರಿನ ಬಸವನಗುಡಿಯ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗೆಡೆಯ ನಂತರ ಮಾತನಾಡಿದ ಅನಂತ್ನಾಗ್, “ಬಾಲ್ಯದಲ್ಲಿ ನಮಗೆ 30-40 ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು- ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು.
ರಮೇಶ್ ಅರವಿಂದ್ ಮಾತನಾಡಿ, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ನಾಗ್, ರಮೇಶ್ ಅರವಿಂದ್, ಜೋಗಿ, ರಾಘವೇಂದ್ರ ಹುಣಸೂರು, ಜಮೀಲ್ ಸಾವಣ್ಣ ಮತ್ತಿತರರು ಉಪಸ್ಥಿತರಿದ್ದರು.