ವಿಜಯನಗರ ಸಾಮ್ರಾಜ್ಯ ಉತ್ತುಂಗದಲ್ಲಿದ್ದಾಗ ಅದರ ರಾಜಧಾನಿ “ಹಂಪಿ” ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಅದೆಷ್ಟೋ ರಾಜರು, ಸಾಮಂತರು, ರಾಯಭಾರಿಗಳು, ವ್ಯಾಪಾರಿಗಳು (ವಿದೇಶಿ ಮತ್ತು ಸ್ಥಳೀಯ), ವೇದ ಪಂಡಿತರು, ಕಲಾವಿದರು, ಪ್ರವಾಸಿಗರು ಹೀಗೆ ಹತ್ತು ಹಲವಾರು ಕ್ಷೇತ್ರದ ಜನರು ಅದನ್ನು ಸಂದರ್ಶಿಸಿ ಅದರ ಸೌಂದರ್ಯ, ಆಧುನಿಕತೆ, ಅಭಿವೃದ್ಧಿ, ಶ್ರೀಮಂತಿಕೆಗೆ ಮಾರು ಹೋಗಿದ್ದರು. ಅಂದು ಹಂಪಿ ಇಂದಿನ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಂತೆ ವಿಸ್ತಾರವಾಗಿತ್ತು.
ಇಂದಿನ ದಿನಗಳಲ್ಲಿ ಮಂತ್ರಿಗಳು, ಶಾಸಕರು ಮತ್ತು ಸಂಸದರು ಹಾಗೂ ಅವರ ಪರಿವಾರ ಹೇಗೆ ತಮ್ಮ ಒಂದು ಕಾಲನ್ನು ಬೆಂಗಳೂರಿನಲ್ಲಿ ಇಡುತ್ತಾರೋ ಹಾಗೆ ವಿಜಯನಗರದ ರಾಯರ ಆಳ್ವಿಕೆಯ ಕಾಲದಲ್ಲಿಯೂ ಇದೇ ಪದ್ಧತಿ ಜಾರಿಯಲ್ಲಿ ಇತ್ತು. ವಿಜಯನಗರದ ಸಾಮಂತರ ಮಕ್ಕಳು ಹಂಪಿಯಲ್ಲೇ ವಿದ್ಯಾಭ್ಯಾಸ ಪಡೆಯುವ ಪದ್ಧತಿ ಇದ್ದು ಇದಕ್ಕೆ ರಾಜಕೀಯ ವಿಶೇಷತೆಯು ಇದೆ. ಈ ಸಾಮಂತರ ಮಕ್ಕಳು ಹಂಪಿಯಲ್ಲಿ ಓದಿದರೆ ಅವರು ವಿಜಯನಗರದ ರಾಜಕೀಯಕ್ಕೆ ಸಂಬಂಧಪಟ್ಟಂತೆ ರಾಯರು ನಿರ್ಮಿಸಿದ ಅಚ್ಚು ಹಾಕಿಸಿದ ದಾರಿಯಲ್ಲಿ ಸಾಗುತ್ತಿದ್ದರು. ಎರಡನೇ ಅತಿ ಹೆಚ್ಚು ಗಮನಾರ್ಹ ಸಂಗತಿ ಏನೆಂದರೆ ಈ ಮಕ್ಕಳ ಅಪ್ಪಂದಿರು (ಸಾಮಂತರು) ರಾಯರ ಆಸೆ ಹಾಗೂ ಅಪ್ಪಣೆಗೆ ವಿರುದ್ಧವಾಗಿ ನಡೆದು ಕೊಂಡರೆ ಅವರ ಮಕ್ಕಳನ್ನು ದಾಳವಾಗಿ ಉಪಯೋಗಿಸುತ್ತಿದ್ದರು.

16ನೇ ಶತಮಾನದ ಪ್ರಾರಂಭದಲ್ಲಿ ವಿಜಯನಗರದ ರಾಯರ ಕಣ್ಣಿಗೆ ಬಿದ್ದ “ಕೆಳದಿಯ” ವೀರಶೈವ ಗೌಡರು ಹಂತ ಹಂತವಾಗಿ ಹಂಪಿಯಲ್ಲಿ ತಮ್ಮ ವರ್ಚಸ್ಸನ್ನು ಇಮ್ಮಡಿ ಗೊಳ್ಳಿಸುತ್ತಾರೆ. ಕೃಷ್ಣದೇವರಾಯರ ಕಾಲದಲ್ಲಿ ಕೆಳದಿಯ ಹಿರಿಯ ಸದಾಶಿವ ನಾಯಕರು ರಾಯರ ಆಸೆಯಂತೆ ಅವರಿಗೆ ಹಲವಾರು ಯುದ್ಧದಲ್ಲಿ ವಿಜಯವನ್ನು ದೊರಕಿಸಿಕೊಡ್ಡುತ್ತಾರೆ. ಇದಕ್ಕಾಗಿ ರಾಯರಿಂದ ವಂಶಪಾರಂಪರ್ಯವಾಗಿ ಬಳಸಿಕೊಂಡು ಹೋಗಲು “ನಾಯಕ” ಬಿರುದು ಸಿಗುತ್ತದೆ. ದೊಡ್ಡ ಸಂಕಣ್ಣ, ಚಿಕ್ಕ ಸಂಕಣ್ಣ, ರಾಮರಾಜ, ವೆಂಕಟಪ್ಪ ನಾಯಕರು ಎಲ್ಲರೂ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದು ಹಂಪಿಯಲ್ಲೆ. 1565ರ ತಾಳಿಕೋಟಿ ಯುದ್ಧದ ನಂತರ ಹಾಳು ಹಂಪೆಯ ಗತವೈಭವವನ್ನು ಸಾರುವ ಒಂದು ಪುಟ್ಟ ಊರನ್ನು ಸ್ಥಾಪಿಸಲು ಬಯಸಿದ ಹಿರಿಯ ವೆಂಕಟಪ್ಪ ನಾಯಕರು ಅದನ್ನು ತೀರ್ಥಹಳ್ಳಿ ತಾಲ್ಲೂಕಿನ ಭುವನಗಿರಿದುರ್ಗಾದಲ್ಲಿ (ಕವಲೇದುರ್ಗಾದಲ್ಲಿ) ನಿರ್ಮಾಣ ಮಾಡುತ್ತಾರೆ.
ಸರಿಸುಮಾರು 65 ವರ್ಷಗಳ ಕಾಲ ನಮ್ಮ ಕೆಳದಿಯ ಅರಸರ ಮಕ್ಕಳು ಬೆಳೆದ ಹಂಪಿಯಲ್ಲಿ ಒಂದಾದರೂ ವೀರಶೈವ ಮಠ ಇರಲೇ ಬೇಕು ಮತ್ತು ಅದನ್ನು ಹುಡುಕಲೇ ಬೇಕು ಎಂದು ನಿರ್ಧಾರ ಮಾಡಿದಾಗ ನಮ್ಮಗೆ ಆಸರೆಯಾಗಿದ್ದು ಬ್ರಿಟೀಷ್ ಅಧಿಕಾರಿ “ಕೊಲಿನ್ ಮೆಕೆಂಜಿ” ಅವರು ಜನವರಿ 1801ರಲ್ಲಿ ತೆಗೆದ ಆನೆಗೊಂದಿಯ ಜಂಗಮ ಮಠದ ಒಂದು ಸುಂದರ ಕೆತ್ತನೆಯ ಕಲ್ಲಿನ ಕಂಬದ ಚಿತ್ರ. ನಾನು ಹಾಗೂ ನನ್ನ ಮಿತ್ರರು ಈ ಚಿತ್ರವನ್ನು ಹಿಡಿದು ಕೊಂಡು ಹಂಪಿ ಹಾಗೂ ಆನೆಗೊಂದಿ ಸುತ್ತಿದರು ನಮಗೆ ಇದರ ಒಂದೂ ಕುರುಹು ಸಿಗಲಿಲ್ಲ. ಆದರೆ ನಮ್ಮ ಯೋಗ ಚೆನ್ನಾಗಿದ್ದ ಕಾರಣ ವಿಜಯನಗರದ ಅಳಿಯ ರಾಮರಾಯರ ವಂಶಸ್ಥರು ಹಾಗೂ ಅರವಿಡು ರಾಜವಂಶದ ಕುಡಿ “ಶ್ರೀ ಕೃಷ್ಣ ದೇವರಾಯರ” ಪಾರಂಪರಿಕ ಅರಮನೆಯನ್ನು ವೀಕ್ಷಣೆ ಮಾಡಲು ಅವರ ಜೊತೆಗೆ ಆನೆಗೊಂದಿಗೆ ತೆರೆಳಿದಾಗ ಹಾಗೆ ಸುಮ್ಮನೆ ಜಂಗಮ ಮಠದ ಆ ಕಂಬದ ಚಿತ್ರವನ್ನು ಅವರಿಗೆ ತೋರಿಸಿದೆ. ಅವರು ಕೂಡಲೇ ಇದು ನಮ್ಮ ಅರಮನೆಯ ಹಿಂಭಾಗ ಹಾಗು ತುಂಗಭದ್ರಾ ನದಿಯ ಹತ್ತಿರ ಇದೇ ಎಂದು ಹೇಳಿದಾಗ ನಮಗೆ ಆದ ಆನಂದ ಅಷ್ಟಿಷ್ಟಲ್ಲ.
ಕಲ್ಲಿನ ಎರಡು ಅಂತಸ್ತಿನ ಕಂಬಗಳ ವಿನ್ಯಾಸದಲ್ಲಿ ಕಟ್ಟಿರುವ ಅದ್ಭುತ ಜಂಗಮ ಮಠ ನಿಜಕ್ಕೂ ತುಂಬಾ ಸೊಗಸಾಗಿದೆ. ಆದರೆ ಕಾಲಕ್ರಮೇಣ ಹಂಪಿಯ ಅವನತಿಯ ನಂತರದಲ್ಲಿ ಈ ಜಂಗಮ ಮಠದ ಮಹತ್ವವು ಕಡಿಮೆಯಾಗಿ ಇಂದು ಜನರಿಗೆ ಈ ಸ್ಮಾರಕದ ಬಗ್ಗೆ ಮಾಹಿತಿಯೇ ಇಲ್ಲ. ಇನ್ನೂ ಆನೆಗೊಂದಿಯ ಕೆಲವು ಹಿರಿಯ ತಲೆಗಳು ಇದನ್ನು ಈಗಲು ಸಹಾ “ವೀರಶೈವ ಮಠ” ಎಂದು ಕರೆಯುತ್ತಾರೆ. ಇದರ ವಿಸ್ಕೃತ ಲೇಖನ ಮುಂದಿನ ಭಾಗದಲ್ಲಿ ಬರೆಯುತ್ತೇನೆ.
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
![]()








