ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದ ಬಿಲ್ಡರ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಕಡಲ್ಕೊರೆತ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಬಿಲ್ಡರ್ ಒಬ್ಬರರು ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.
ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರಿಗೆ ಮಂಗಳೂರಿನ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಾರು ಸಾಯಿ ನಗರದಲ್ಲಿ 1.22 ಎಕರೆ ಜಾಗ ಮೀಸಲಿಡಲಾಗಿತ್ತು. ಈ ಕೋಟ್ಯಂತರ ರೂ. ಮೌಲ್ಯದ ಜಾಗದಲ್ಲಿ ಪ್ರಭಾವಿ ಬಿಲ್ಡರ್ ಶರತ್ ರಾಜ್ ಎಂಬಾತ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದನು.
ಈ ಬಗ್ಗೆ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಇಂದು ಮಧ್ಯಾಹ್ನ ದಾಳಿ ನಡೆಸಿ, ಅನಧಿಕೃತ ಮನೆ ಕೆಡವಿ ಹಾಕಿದ್ದಾರೆ. ಅಲ್ಲದೇ ಬಿಲ್ಡರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಗರಣದಲ್ಲಿ ಉಳ್ಳಾಲ ನಗರಸಭೆ, ಕೋಟೆಕಾರು ಪಪಂ ಮತ್ತು ಕಂದಾಯ ಇಲಾಖೆಯ ಅಧಿಕಾರಿ ವರ್ಗ ಲಂಚ ಪಡೆದು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.









