ಪುತ್ತೂರು: ಇಲ್ಲಿನ ರಾಜಕೀಯ ವಲಯದಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ಇದೀಗ ಅದು ವಿಕೋಪಕ್ಕೆ ತಿರುಗಿದೆ. ಪವಿತ್ರವಾದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಅವಮಾನಿಸಿ, ಹೊರದಬ್ಬಿದ ಆಘಾತಕಾರಿ ಘಟನೆ ನಡೆದಿದೆ.
ಸ್ಥಾಪಕಾಧ್ಯಕ್ಷರಿಗೇ ಗೇಟ್ ಪಾಸ್!
ವಿಪರ್ಯಾಸವೆಂದರೆ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರೂ ಆಗಿರುವ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಸ್ವತಃ ಕಾರ್ಯಕ್ರಮದ ಆಯೋಜಕರೇ ಆಮಂತ್ರಣ ನೀಡಿ ಕರೆದಿದ್ದರು. ಆಮಂತ್ರಣದ ಮೇರೆಗೆ ತಮ್ಮ ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಸನ್ನ ಕುಮಾರ್ ಅವರನ್ನು, ಪುತ್ತಿಲ ಪರಿವಾರದ ಕಾರ್ಯಕರ್ತರು ಗೇಟ್ ಬಳಿಯೇ ತಡೆದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ದೇವರ ಕಾರ್ಯಕ್ರಮವೆಂದೂ ನೋಡದೆ ಸಾರ್ವಜನಿಕವಾಗಿ ಅವರನ್ನು ದೈಹಿಕವಾಗಿ ತಳ್ಳಿ, ಹೊರದಬ್ಬುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾಲಿಂಗೇಶ್ವರನ ನಡೆದಿ ಕಣ್ಣೀರಿಟ್ಟ ಮಾರ್ತ
ತಮಗಾದ ಘೋರ ಅವಮಾನದಿಂದ ಮನನೊಂದ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ತೆರಳಿ ಕಣ್ಣೀರು ಹಾಕಿದ್ದಾರೆ. ದೇವರ ಎದುರು ನಿಂತು, ತನಗೆ ಮತ್ತು ತನ್ನ ಕುಟುಂಬಕ್ಕೆ ಆದ ಅವಮಾನವನ್ನು ತೋಡಿಕೊಂಡ ಅವರು, ನನಗೆ ಅವಮಾನ ಮಾಡಿದವರಿಗೆ ಶಿಕ್ಷೆ ನೀಡಬೇಡ, ಅವರಿಗೆ ಸಂಸಾರವಿದೆ. ಬದಲಾಗಿ ಅವರಿಗೆ ಒಳ್ಳೆಯ ಬುದ್ಧಿಯನ್ನು ಕೊಡು ಎಂದು ಭಾವುಕರಾಗಿ ಪ್ರಾರ್ಥಿಸಿದ್ದಾರೆ. ಈ ಘಟನೆಯಿಂದ ನೊಂದ ಅವರ ಪತ್ನಿಯೂ ದೇವರ ಮಣ್ಣಿನಲ್ಲಿ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಕಣ್ಣೀರು ಒರೆಸಿಕೊಳ್ಳುತ್ತಲೇ ಮಾತನಾಡಿದ ಪ್ರಸನ್ನ ಕುಮಾರ್, ನಾನು ಪುತ್ತಿಲ ಪರಿವಾರದಲ್ಲಿದ್ದಾಗಲೂ ಹಿಂದೂ ಸಮಾಜಕ್ಕಾಗಿ ದುಡಿದಿದ್ದೇನೆ. ಈಗ ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾದ ಮೇಲೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ ನಾನು ಬಿಜೆಪಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪುತ್ತಿಲ ಪರಿವಾರದ ಕಡೆಯಿಂದ ತೀವ್ರ ಒತ್ತಡ ಬರುತ್ತಿದೆ. ನಿನ್ನೆ ನಡೆದ ಘಟನೆ ಪೂರ್ವನಿಯೋಜಿತವಾಗಿದ್ದು, ಯಾರದ್ದೋ ಪ್ರೇರಣೆಯಿಂದ ಕಾರ್ಯಕರ್ತರು ಈ ರೀತಿ ವರ್ತಿಸಿದ್ದಾರೆ ಎಂದು ದೂರಿದರು.
ಬಿಜೆಪಿ ವರಿಷ್ಠರಿಂದ ಸಾಂತ್ವಾನ
ಕಾರ್ಯಕ್ರಮದಲ್ಲಿ ಬಿಜೆಪಿಯ ಇತರ ಪದಾಧಿಕಾರಿಗಳಿದ್ದರೂ, ಕೇವಲ ನನ್ನನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ. ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ವ್ಯಕ್ತಿಯ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ. ಇನ್ನು ಈ ಘಟನೆ ತಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಸನ್ನ ಕುಮಾರ್ ಅವರಿಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಜಿಲ್ಲೆಯ ಶಾಸಕರು ಹಾಗೂ ಪ್ರಮುಖ ನಾಯಕರು ಕರೆ ಮಾಡಿ ಧೈರ್ಯ ತುಂಬಿದ್ದಾರೆ.
ಒಟ್ಟಿನಲ್ಲಿ ದೇವರ ಸನ್ನಿಧಿಯಲ್ಲಿ ನಡೆದ ಈ ಹೈಡ್ರಾಮ ಪುತ್ತೂರು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.








