ಕೊರೊನಾ ಹೊಡತಕ್ಕೆ ಇಡಿ ದೇಶವೇ ತತ್ತರಿಸಿದೆ. ಈ ಮಹಾಮಾರಿ ಹರಡದಂತೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಅಲ್ಲದೆ ರಿಟೇಲ್ ವಲಯದಲ್ಲಿ ಸರಿಸುಮಾರು 80,000 ಉದ್ಯೋಗ ನಾಶವಾಗಲಿವೆ ಎಂದು ರಿಟೇಲ್ ವ್ಯಾಪಾರಿಗಳ ಸಂಘ (ಆರ್ ಏ ಐ) ತಿಳಿಸಿದೆ.
ಈ ಬಗ್ಗೆ ರಿಟೇಲ್ ವ್ಯಾಪಾರಿಗಳ ಸಂಘ ದೇಶಾದಾದ್ಯಂತ 768 ರಿಟೇಲ್ ವಹಿವಾಟುದಾರರ ಅಭಿಪ್ರಾಯ ಸಂಗ್ರಹಿಸಿದೆ. ಈ ವಹಿವಾಟುದಾರರು ಭಾರತದಾದ್ಯಂತ 3,92,963 ಉದ್ಯೋಗಿಗಳನ್ನು ಹೊಂದಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಲಾಕ್ ಡೌನ್ ಆಗಿರುವ ಕಾರಣಕ್ಕೆ ಇವರಿಗೆ ಪೆಟ್ಟು ಬಿದಿದ್ದೆ. ಇದರಿಂದಾಗಿ ಸಣ್ಣ ಚಿಲ್ಲರೆ ವ್ಯಾಪಾರಿಗಳು ತಮ್ಮ 30% ಉದ್ಯೋಗಿಗಳನ್ನು ತೆಗೆಯುವ ಆತಂಕ ಎದುರಾಗಿದೆ. ಮಧ್ಯಮ ಗಾತ್ರದ ವ್ಯಾಪಾರಿಗಳ 12% ಮತ್ತು ದೊಡ್ಡ ವ್ಯಾಪಾರಸ್ಥರು 5% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ ಎಂದು ಆರ್ ಏ ಐ ತಿಳಿಸಿದೆ. ರಿಟೇಲ್ ವ್ಯಾಪಾರಿಗಳ ಸಂಘ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಚಿಲ್ಲರೆ ವ್ಯಾಪಾರಿಗಳು 20% ರಷ್ಟು ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯಲ್ಲಿ ಇದ್ದಾರೆ. ಲಾಕ್ ಡೌನ್ ಮಾಡಿದ ಕಾರಣಕ್ಕೆ ಆಹಾರಯೇತರ ರಿಟೇಲ್ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಬಂದ್ ಮಾಡಿದ್ದಾರೆ. ಆದ್ದರಿಂದ ವ್ಯಾಪಾರಿಗಳಿಗೆ ಲಾಭ ಇಲ್ಲದಂತೆ ಆಗಿದೆ. ಆರು ತಿಂಗಳಿನಲ್ಲಿ ಕಳೆದ ಆರು ವರ್ಷದ ಲಾಭಕ್ಕಿಂತಲೂ 40% ಕಡಿಮೆ ಆಗಲಿದೆ. ಈ ಕಾರಣಕ್ಕಾಗಿ ಉದ್ಯೋಗಗಳು ನಾಶ ಆಗುವ ಸಾಧ್ಯತೆ ಇದೆ ಎಂದು ರಿಟೇಲ್ ವ್ಯಾಪಾರಿಗಳ ಸಂಘ ಹೇಳಿದೆ.








