ಚೈನಾದ ವುಹಾನ್ ನಿಂದ ಹೊರಟು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸದ್ಯ ಭಾರತ ಲಾಕ್ ಡೌನ್ ಬಳಿಕ ಅನ್ನದಾತನನ್ನು ಕಂಗಾಲಾಗಿಸಿದೆ. ಒಂದು ಕಡೆ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಕಣ್ಣೀರಿಟ್ಟರೆ,ಪ್ರತಿವರ್ಷ ಒಣ ಭೂಮಿಯಲ್ಲಿ ಹನಿ ನೀರಾವರಿ ಪದ್ದತಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದು ದೂರದ ಗೋವಾ ಮುಂಬೈ ಅಂತಹ ಪರರಾಜ್ಯದ ಪಟ್ಟಣಗಳಿಗೆ ಮಾರಾಟಕ್ಕೆ ಹೋಗುತ್ತಿದ್ದ ಮತ್ತು ಕೈತುಂಬ ಆದಾಯ ತರುತ್ತಿದ್ದ ಕಲ್ಲಂಗಡಿ ಹಣ್ಣು ಸದ್ಯ ಮಾರಾಟವಾಗದೆ ರೈತರ ಬದುಕಿನ ಮೇಲೆ ಬರೆ ಎಳೆದಿದೆ.
ಸಾಲ ಸೋಲ ಮಾಡಿ ಬಂಪರ್ ಬೆಳೆ ಬರುವ ಕನಸು ಕಾಣುತ್ತ ಇದ್ದ ರೈತರು ಅಕಾಲಿಕ ಮಳೆಯಿಂದ ತತ್ತರಿಸಿದರೆ ಇನ್ನೊಂದು ಕಡೆ ದೇಶಾದ್ಯಂತ ಲಾಕ್ ಡೌನ ಬೆನ್ನಲ್ಲೆ ಎರಡು ಎಕರೆಯಷ್ಟು ಕಲ್ಲಂಗಡಿ ಬೆಳೆದಿದ್ದ ಅಥಣಿ ತಾಲೂಕಿನ ಮಾಯನಟ್ಟಿ ಗ್ರಾಮದ ರೈತ ಶಂಕರ ಬೇವನೂರ ಕಣ್ಣೀರು ಹಾಕುವಂತಾಗಿದೆ.
ಅಂದುಕೊಂಡಂತೆ ಬೆಳೆ ಬಂದರೂ ಕೂಡ ಸೂಕ್ತ ಬೆಲೆ ಸಿಗದೆ ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವದಕ್ಕೆ ಹಿಡಿಶಾಪ ಹಾಕುವಂತಾಗಿದ್ದು ಲಾಕ್ ಡೌನ್ ಮತ್ತು ಅಕಾಲಿಕ ಮಳೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರ ಬೆಳೆಪತಿಹಾರ ಒದಗಿಸಿ ಕೊಡುವ ಮೂಲಕ ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.