ಮಾಸ್ಕೋದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸೇನೆಯ ಆಕರ್ಷಕ ಪಥಸಂಚಲನ
ಮಾಸ್ಕೋ, ಜೂನ್ 26: 1941-1945ರ 2ನೇ ಮಹಾ ಯುದ್ಧದಲ್ಲಿನ ವಿಜಯದ ಹಿನ್ನಲೆಯಲ್ಲಿ ರಷ್ಯಾ ಆಯೋಜಿಸಿದ 75 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾಸ್ಕೋದ ರೆಡ್ ಸ್ಕ್ವೇರ್ ನಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತ್ರಿ-ಸೇವಾ ತಂಡವು ಭಾಗವಹಿಸಿತು
2ನೇ ಮಹಾಯುದ್ಧ ವಿಜಯೋತ್ಸವದ ಹಿನ್ನಲೆಯಲ್ಲಿ ನಡೆದ ವಿಕ್ಟರಿ ಡೇ ಪರೇಡ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾಗಿದ್ದರು.

2ನೇ ವಿಶ್ವಯುದ್ಧದಲ್ಲಿ ರಷ್ಯಾ ಮತ್ತು ಮಿತ್ರ ರಾಷ್ಟ್ರಗಳ ಯೋಧರು ಪ್ರದರ್ಶಿಸಿದ್ದ ವೀರತ್ವ ಮತ್ತು ತ್ಯಾಗವನ್ನು ಈ ಸಂದರ್ಭದಲ್ಲಿ ಗಣ್ಯರು ಸ್ಮರಿಸಿದರು.
ಪರೇಡ್‌ಗೂ ಮುನ್ನ ರಾಜನಾಥ್ ಸಿಂಗ್ ಅವರು ಟ್ವಿಟ್ಟರಿನಲ್ಲಿ,“1941- 45ರ ಮಹಾಯುದ್ಧದ 75ನೇ ವಿಜಯೋತ್ಸವದ ನೆನಪಿಗಾಗಿ ವಿಕ್ಟರಿ ಪರೇಡ್ ಆಯೋಜಿಸಲಾಗಿದೆ. ಈ ಪರೇಡ್ ನಲ್ಲಿ ಭಾರತೀಯ ಸಶಸ್ತ್ರ ಪಡೆಯ ಮೂರೂ ದಳಗಳೂ ಭಾಗವಹಿಸಿದ್ದು, ಭಾರತಕ್ಕೆ ಹೆಮ್ಮೆಯ ಸಂಗತಿ’ ಎಂದು ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡಿದ್ದರು.

ರಷ್ಯಾ ಪ್ರತಿವರ್ಷ ಮೇ 9ರಂದು 2ನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಹಿಮ್ಮೆಟ್ಟಿಸಿದ ನೆನಪಿಗಾಗಿ ವಿಕ್ಟರಿ ಪರೇಡ್ ಆಯೋಜಿಸುತ್ತದೆ. ಈ ವರ್ಷ ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ತಡವಾಗಿ ಆಯೋಜಿಸಲ್ಪಟ್ಟಿದೆ. ವಿಜಯ ದಿನದ ಪರೇಡ್‌ನಲ್ಲಿ ಭಾರತೀಯ ಸೇನೆಯ 75 ವೀರಯೋಧರು ಶಿಸ್ತುಬದ್ಧ ಆಕರ್ಷಕ ಪಥಸಂಚಲನ ನಡೆಸಿದರೆ, ರಷ್ಯಾದ 13,000 ಸೈನಿಕರು ಪರೇಡ್‌ನಲ್ಲಿ ಪಾಲ್ಗೊಂಡಿದ್ದರು.








