ಇತರರಿಗೆ ಮಾದರಿಯಾದ ಐದನೇ ತರಗತಿಯ ಸಿಂಧೂರಿ
ಉಡುಪಿ, ಜೂನ್ 28: ಪ್ರಸಕ್ತ ಸನ್ನಿವೇಶದಲ್ಲಿ ಎಸ್ ಎಸ್ ಎಲ್.ಸಿ ಪರೀಕ್ಷೆ ಗಳನ್ನು ನಡೆಸುವ ತೀರ್ಮಾನಕ್ಕೆ ಸರ್ಕಾರ ಬಂದಿದ್ದು, ಈಗಾಗಲೇ ಪರೀಕ್ಷೆಗಳು ಪ್ರಾರಂಭಗೊಂಡಿವೆ. ಸರ್ಕಾರ ವಿದ್ಯಾರ್ಥಿಗಳ ರಕ್ಷಣೆಯ ದೃಷ್ಟಿಯಿಂದ ಮಾಸ್ಕ್ ನ್ನು ಕಡ್ಡಾಯ ಮಾಡಿದೆ. ಹಾಗಾಗಿ ಅನೇಕ ಸಂಘ ಸಂಸ್ಥೆಗಳು ಈ ಮಾಸ್ಕ್ ತಯಾರಿಕೆಯಲ್ಲಿ ಕೈ ಜೋಡಿಸಿವೆ. ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ ಮೊದಲಾದ ಸಂಘಟನೆಗಳು ತಮ್ಮ ಘಟಕದ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಈ ತಯಾರಿಕೆಗೆ ತೊಡಗುವಂತೆ ಸೂಚಿಸಿವೆ. ಅಂಗ ನ್ಯೂನತೆಯಿದ್ದರೂ, ಒಂದು ಕೈಯಲ್ಲೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಬಾಲಕಿ ಸಿಂಧೂರಿ 15 ಮಾಸ್ಕ್ ತಯಾರಿಸಿದ್ದು ಬಾಲಕಿಯ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಉಡುಪಿಯ ಕಲ್ಯಾಣಪುರದ ನಿವಾಸಿಗಳಾದ ಸುಧೀರ್ ಮತ್ತು ರೇಣುಕಾ ದಂಪತಿಯ ಪುತ್ರಿ ಸಿಂಧೂರಿ ಕಲ್ಯಾಣಪುರದ ಮೌಂಟ್ ರೊಸರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದು ಸ್ಕೌಟ್ಸ್ ಆಂಡ್ ಗೈಡ್ನಲ್ಲಿ ಬುಲ್ ಬುಲ್ ಆಗಿದ್ದಾರೆ. ಎಡಗೈ ಬೆಳವಣಿಗೆ ಕಳೆದುಕೊಂಡಿರುವ ಸಿಂಧೂರಿ ಅವರು ತಮ್ಮ ಒಂದು ಕೈಯಲ್ಲೇ ಮಾಸ್ಕ್ ತಯಾರಿಸಿ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಶಹಬಾಷ್ ಎಂದಿದ್ದಾರೆ. ಶಾಸಕ ರಘುಪತಿ ಭಟ್ ಸಿಂಧೂರಿ ಮನೆಗೆ ಭೇಟಿ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ.
ಮೌಂಟ್ ರೆಸರಿಯೊ ಶಾಲೆಯ ಅಧ್ಯಾಪಕರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷೆಯ ಹಿನ್ನಲೆಯಲ್ಲಿ ಮಕ್ಕಳಿಗಾಗಿ ಮಾಸ್ಕ್ ತಯಾರಿಸಲು ಸೂಚಿಸಿದ್ದು, ತನ್ನ ಅಂಗನ್ಯೂನತೆಯನ್ನು ಲೆಕ್ಕಿಸದೆ ಸಿಂಧೂರಿ ಕೂಡ ಮಾಸ್ಕ್ ಹೊಲಿದು ಶಾಲೆಗೆ ನೀಡಿದ್ದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.








