ಕಾರು, ಬೈಕಗೆ ಮರುಳಾದ ತಂಗಿ, ತಂಗಿಗಾಗಿ ಮರುಳಾದ ಅಕ್ಕ | ಯುವಕನಿಂದ ಪಂಗನಾಮ
ಶಿವಮೊಗ್ಗ: ಯುವಕನೊಬ್ಬ ಯುವತಿಯರಿಬ್ಬರಿಗೆ ಮೋಸ ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ಅಚ್ಯುತ್ರಾವ್ ಲೇಔಟ್ ನಿವಾಸಿ ಪುನೀತ್ ಮೋಸ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಈತ ಮೊದಲು ಭದ್ರಾವತಿ ಜನ್ನಾಪುರ ನಿವಾಸಿ ತಂಗಿ ಅನುಷಾಳಿಗೆ ಮೋಸ ಮಾಡಿದ್ದಾನೆ. ನಂತರ ಅಕ್ಕ ಅರ್ಪಿತಾಳಿಗೆ ಮೋಸ ಮಾಡಿದ್ದಾನೆ.
ನಡೆದಿದ್ದೇನು? : ಪುನಿತ್ ತಾನೊಬ್ಬ ಶ್ರೀಮಂತ, ನನಗೆ ಶಿವಮೊಗ್ಗದಲ್ಲಿ ದೊಡ್ಡ ಬಂಗಲೆ ಇದೆ, ತಾನು ಐಶಾರಾಮಿ ಜೀವನ ನಡೆಸುತ್ತಿದ್ದೇನೆ ಎಂದು ಅನುಷಾಳನ್ನು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಈತ ತನ್ನ ಐಶಾರಾಮಿ ಸೋಗನ್ನು ತೋರಿಸಲು ಪ್ರತಿನಿತ್ಯ ಕಾರುಗಳನ್ನು ಹಾಗೂ ಬೈಕ್ ಗಳನ್ನು ಬದಲಾಯಿಸುತ್ತಿದ್ದ. ಇದನ್ನು ಕಂಡು ಯುವತಿ ಆತನ ಮಾಯಾ ಜಾಲಕ್ಕೆ ಮಾರು ಹೋಗಿ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.
ನಂತರ 2017ರಲ್ಲಿ ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಮೊದಲು ಆರು ತಿಂಗಳುಗಳ ಕಾಲ ಸುಖ ಜೀವನ ನಡೆಸಿದ್ದಾರೆ. ನಂತರ ಇಬ್ಬರ ನಡುವೆ ಜಗಳ, ಗಲಾಟೆ ಶುರುವಾಗಿದೆ. ಬಳಿಕ ಪುನಿತ್ ಸ್ವಂತ ಕಾರು ಉದ್ಯಮ ಪ್ರಾರಂಭಿಸಲು ಮುಂದಾಗಿದ್ದಾನೆ. ಹೀಗಾಗಿ ಅನುಷಾಳ ಅಕ್ಕ ಅರ್ಪಿತಾಳ ಮೊರೆ ಹೋಗಿದ್ದಾನೆ.
ಪುನಿತ್ ಅರ್ಪಿತಾಳಿಂದ ಸುಮಾರು 22.80 ಲಕ್ಷ ರೂ. ಪಡೆದಿದ್ದಾನೆ. ಅರ್ಪಿತ ತನ್ನ ತಂಗಿ ಬದುಕು ಚೆನ್ನಾಗಿರಲಿ ಎಂದು ಪುನೀತ್ ಕೇಳಿದಾಗಲೆಲ್ಲಾ ತನ್ನ ಬಳಿಯಿದ್ದ ಹಣ ಸೇರಿದಂತೆ ತಾನು ಕೆಲಸ ಮಾಡುವ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದು ಕೊಟ್ಟಿದ್ದಾರೆ.
ಅರ್ಪಿತಾ ನೀಡಿದ ಹಣದಲ್ಲಿ ಪುನೀತ್ ತಂದೆ ಅಶ್ವತ್ಥ್ ನಾರಾಯಣ, ತಾಯಿ ಮಂಜುಳಾ, ಪುನೀತ್ ಅಕ್ಕ ಸ್ಮಿತಾ, ಶಮಂತಗೌಡ ಸೇರಿದಂತೆ ಎಲ್ಲರೂ ಮೋಸ ಮಾಡಿದ್ದಾರೆ. ನಮ್ಮ ಹಣದಲ್ಲಿ ಪುನೀತ್ ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೂ ನನ್ನ ತಂಗಿಗೂ ಪುನೀತ್ ಮೋಸ ಮಾಡಿದ್ದಾನೆ ಎಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅರ್ಪಿತಾ ದೂರು ದಾಖಲಿಸಿದ್ದಾರೆ.








