ಪತ್ನಿ ಮಾಡಿದ ಅಡುಗೆ ರುಚಿ ಇಲ್ಲವೆಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ…
ಪತ್ನಿ ರುಚಿಯಾಗಿ ಅಡುಗೆ ಮಾಡುತ್ತಿಲ್ಲವೆಂದು ಮನನೊಂದು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಗುಡೂರು ಮಂಡಲದ ಪಿಂಡಿವಾನಿಪಾಲೆಂ ಗ್ರಾಮದಲ್ಲಿ ನಡೆದಿದೆ.
30 ವರ್ಷದ ತಿರುಮಲ ರಾವ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪೇಂಟರ್ ವೃತ್ತಿಯ ಮೂಲಕ ಜೀವನ ನಡೆಸುತ್ತಿದ್ದರು. ತಿರುಮಲ ರಾವ್ ಮದ್ಯವ್ಯಸನಿಯಾಗಿದ್ದು ಕುಡಿದು ಬಂದು ಪತ್ನಿ ನಿರ್ಮಲಾ ಜ್ಯೋತಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಕಳೆದ ವರ್ಷ ಮದುವೆಯಾಗಿದ್ದ ದಂಪತಿಗಳಿಗೆ ಪುತ್ರಿಯೊಬ್ಬಳಿದ್ದಾಳೆ.
ಶುಕ್ರವಾರ ತಿರುಮಲ ರಾವ್ ಮನೆಗೆ ಕುಡಿದು ಮನೆಗೆ ಬಂದು ರುಚಿಯಾಗಿ ಅಡುಗೆ ಮಾಡಿಲ್ಲವೆಂದು ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಬಳಿಕ ಮನೆ ಬಿಟ್ಟು ಹೋಗಿ ಸ್ನೇಹಿತ ಗೋಪಿ ಎಂಬಾತನ ಮನೆಯಲ್ಲಿ ಉಳಿದುಕೊಂಡಿದ್ದಾನೆ.
ಮರುದಿನ ಸ್ನೇಹಿತ ಗೋಪಿ ಕೆಲಸಕ್ಕೆಂದು ಹೊರಗೆ ಹೋದಾಗ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳಿಕ ವಿಚಾರ ತಿಳಿದ ನೆರೆಹೊರೆಯವರು ಕೂಡಲೇ ಪತ್ನಿ ಜ್ಯೋತಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಜ್ಯೋತಿ ಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಜ್ಯೋತಿಯವರು ನೀಡಿದ ದೂರಿನ ಆಧಾರದ ಮೇಲೆ ಪೆಡನಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.







