ಕೋಲಾರ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಆತನನ್ನು ಅಟ್ಟಾಡಿಸಿ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಉಸ್ಮಾನ್ ಕೊಲೆಯಾಗಿರುವ ವ್ಯಕ್ತಿ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಆಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಮಧ್ಯೆ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್ ಪ್ರೀತಿಯಲ್ಲಿ ಬಿದ್ದಿದ್ದಾನೆ. ಹೀಗಾಗಿ ಆತನ ಪತ್ನಿ ದೂರಾಗಿ ತನ್ನ ತವರು ಸೇರಿದ್ದಳು.
ಕಳೆದ ರಾತ್ರಿ ಉಸ್ಮಾನ್ ಯುವತಿ ಮನೆಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾನಂತೆ. ಮಗಳನ್ನು ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಜಗಳ ನಡೆದಿದೆ. ನಂತರ ಉಸ್ಮಾನ್ ನನ್ನು ಹುಡುಗಿ ಕಡೆಯವರು ಹಿಂಬಾಲಿಸಿಕೊಂಡು ಹೋಗಿ ನೂರ್ ನಗರ ಸಮೀಪ ಹಿಡಿದು ಹಲ್ಲೆ ಮಾಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.








