ರಾಯಚೂರು: ಊರಿಗೆ ತೆರಳಲು ಬಸ್ (Bus) ಸಿಗದ ಹಿನ್ನೆಲೆಯಲ್ಲಿ ಕೋಪಗೊಂಡ ವ್ಯಕ್ತಿಯೊಬ್ಬ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ಆರೋಪಿಯನ್ನು ಹಟ್ಟಿ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಲಿಂಗಸುಗೂರಿನ (Lingsugur) ಗೋಲಪಲ್ಲಿಯ ತಿಮ್ಮಣ್ಣ ಎನ್ನಲಾಗಿದೆ. ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ. ಅಲ್ಲದೇ, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನು ಬೆಂಗಳೂರಿಗೆ ಕಳುಹಿಸಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಬಸ್ ಸಿಕ್ಕಿರಲಿಲ್ಲ. ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಬಂಧಿಸಲಾಗಿದ್ದು, ಸ್ನೇಹಿತರು ತಲೆ ಮರೆಸಿಕೊಂಡಿದ್ದಾರೆ.








