ಬಾಗಲಕೋಟೆ: ಕರ್ನಾಟಕ ಬಿಜೆಪಿಯ ಅಂಗಳದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯ ರಾಜಕೀಯದ ದಿಕ್ಸೂಚಿ ಬದಲಾಗುವ ಸೂಚನೆ ನೀಡುತ್ತಿವೆ. ಪರಸ್ಪರ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದ, ಮಾಧ್ಯಮಗಳ ಮುಂದೆ ಒಬ್ಬರನ್ನೊಬ್ಬರು ಕೆಣಕುತ್ತಿದ್ದ ನಾಯಕರು ಈಗ ಒಂದೇ ಸೋಫಾದಲ್ಲಿ ಕುಳಿತು ನಗುನಗುತ್ತಾ ಮಾತನಾಡುತ್ತಿರುವುದು ಕಮಲ ಪಾಳೆಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗಿನ ಅನಿರೀಕ್ಷಿತ ಭೇಟಿಯ ಬೆನ್ನಲ್ಲೇ, ಈಗ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಬಾಗಲಕೋಟೆಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರ ನಿವಾಸದಲ್ಲಿ ಈ ಹೈವೋಲ್ಟೇಜ್ ಭೇಟಿ ನಡೆದಿದೆ. ಮಹಾನವಮಿಯ ಶುಭ ಸಂದರ್ಭದಲ್ಲಿ ಭಾಂಡಗೆ ಅವರ ಮನೆಗೆ ಆಗಮಿಸಿದ ಯತ್ನಾಳ್ ಅವರನ್ನು ಬನ್ರೀ ಹಿಂದೂ ಹೃದಯ ಸಾಮ್ರಾಟ್ ಎಂದು ಆತ್ಮೀಯವಾಗಿ ಸ್ವಾಗತಿಸಲಾಯಿತು. ಇದೇ ವೇಳೆ ಅಲ್ಲಿ ಹಾಜರಿದ್ದ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ಸುಮಾರು ಹೊತ್ತು ಪರಸ್ಪರ ಕುಶಲೋಪರಿ ವಿಚಾರಿಸಿ, ಹಳೆಯ ಕಹಿಯನ್ನು ಮರೆತು ನಗುನಗುತ್ತಾ ಕಾಲ ಕಳೆದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂಬ ನಿರಾಣಿ ಅವರ ಹೇಳಿಕೆಯು ಯತ್ನಾಳ್ ಅವರ ಘರ್ ವಾಪ್ಸಿಗೆ ವೇದಿಕೆ ಸಿದ್ಧವಾಗುತ್ತಿದೆಯೇ ಎಂಬ ಸಂಶಯಕ್ಕೆ ಪುಷ್ಟಿ ನೀಡಿದೆ.
ಹೊಸ ಉಸ್ತುವಾರಿ ಹರೀಶ್ ದ್ವಿವೇದಿ ಅವರ ಚಾಣಾಕ್ಷ ನಡೆ
ಈ ಎಲ್ಲಾ ಬೆಳವಣಿಗೆಗಳ ಹಿಂದೆ ದೆಹಲಿಯ ಹೈಕಮಾಂಡ್ ಹಸ್ತವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಅಧಿಕಾರ ವಹಿಸಿಕೊಂಡ ನಂತರ, ಪಕ್ಷದಿಂದ ದೂರವಾಗಿರುವ ಮತ್ತು ಅಸಮಾಧಾನಗೊಂಡಿರುವ ನಾಯಕರನ್ನು ಒಗ್ಗೂಡಿಸುವ ಕೆಲಸ ತೆರೆಮರೆಯಲ್ಲಿ ಚುರುಕುಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ಸೂಚನೆಯಂತೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ. ವಿಜಯೇಂದ್ರ ಅವರ ಕಾದು ನೋಡೋಣ ಎಂಬ ಮೌನ ಮತ್ತು ಈಶ್ವರಪ್ಪ ಅವರ ವಾಪಸಾತಿ ಕುರಿತಾದ ಮಾತುಗಳು ಬಿಜೆಪಿಯ ಆಂತರಿಕ ಧ್ರುವೀಕರಣದ ಸ್ಪಷ್ಟ ಸಂಕೇತಗಳಾಗಿವೆ.
ಸತತವಾಗಿ ವಿಜಯಪುರ ಮತ್ತು ಬಾಗಲಕೋಟೆ ಭಾಗದ ಪ್ರಬಲ ಲಿಂಗಾಯತ ನಾಯಕರು ಒಂದಾಗುತ್ತಿರುವುದು ರಾಜ್ಯ ಬಿಜೆಪಿಗೆ ಹೊಸ ಶಕ್ತಿ ನೀಡುವ ಮುನ್ಸೂಚನೆಯಾಗಿದೆ. ವಿಜಯೇಂದ್ರ, ಯತ್ನಾಳ್ ಮತ್ತು ನಿರಾಣಿ ಎಂಬ ಮೂರು ಪ್ರಬಲ ಶಕ್ತಿಗಳು ಒಂದಾದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಉಚ್ಚಾಟಿತ ನಾಯಕರ ಮೇಲಿನ ನಿಷೇಧ ಹಿಂಪಡೆಯುವ ಪ್ರಕ್ರಿಯೆ ದೀಪಾವಳಿ ನಂತರ ಅಧಿಕೃತ ರೂಪ ಪಡೆಯುವ ಸಾಧ್ಯತೆಯಿದ್ದು, ಕಮಲದ ಪಾಳೆಯದಲ್ಲಿ ಮತ್ತೆ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿದೆ.







