ಮಗನ ಸ್ಮರಣಾರ್ಥ 61 ಕೇರಳಿಗರ ಟಿಕೆಟ್ಗಳನ್ನು ಪ್ರಾಯೋಜಿಸಿದ ದುಬೈನ ಅನಿವಾಸಿ ಭಾರತೀಯ
ದುಬೈ, ಅಗಸ್ಟ್ 2: ಕಳೆದ ವರ್ಷ ಕಾರು ಅಪಘಾತದಲ್ಲಿ ಮೃತಪಟ್ಟ ತನ್ನ ದಿವಂಗತ ಮಗನ ಸ್ಮರಣಾರ್ಥ ದುಬೈ ಮೂಲದ ಅನಿವಾಸಿ ಭಾರತೀಯ ಟಿ.ಎನ್.ಕೃಷ್ಣಕುಮಾರ್ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸಿಲುಕಿದ್ದ 61 ಕೇರಳಿಗರ ಟಿಕೆಟ್ಗಳನ್ನು ಪ್ರಾಯೋಜಿಸಿದ್ದಾರೆ.
ಇವರು ತುಂಬಾ ಕಷ್ಟದಲ್ಲಿ ಸಿಲುಕಿದ್ದ ಜನರು. ಅವರಲ್ಲಿ ಹೆಚ್ಚಿನವರು, ಮನೆಗೆ ಮರಳಲು ಯಾವುದೇ ಆರ್ಥಿಕ ಶಕ್ತಿಯಿಲ್ಲದೆ ಉದ್ಯೋಗ ಕಳೆದುಕೊಂಡಿದ್ದಾರೆ. ಅವರು ಮನೆಗೆ ಹೋಗಿ ಅವರ ಕುಟುಂಬದವರ ಜೊತೆ ಇರಬೇಕೆಂದು ನಾನು ಬಯಸುತ್ತೇನೆ ಎಂದು ಕಳೆದ 32 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಕೃಷ್ಣಕುಮಾರ್ ಅವರು ಹೇಳಿದ್ದಾರೆ.
1988 ರಲ್ಲಿ ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾದ ಕೃಷ್ಣಕುಮಾರ್ ಅವರು ಕೇರಳದ ವಿಜ್ಞಾನ ಮತ್ತು ಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಯುಎಇಯಲ್ಲಿ ಸ್ಥಾಪಿಸಲಾದ ಸ್ವಯಂಸೇವಕ ಗುಂಪಿನ ಆಲ್ ಕೇರಳ ಕಾಲೇಜು ಅಲುಮ್ನಿ ಫ್ರಂಟ್ (ಎಕೆಸಿಎಎಫ್) ನ ಸಕ್ರಿಯ ಸದಸ್ಯರಾಗಿದ್ದಾರೆ.
53 ರ ಹರೆಯದವರಾದ ಅವರು ಕೋವಿಡ್-19 ಸಂದರ್ಭದಲ್ಲಿ ಎಕೆಸಿಎಎಫ್ ವತಿಯಿಂದ ಕಾರ್ಮಿಕ ಶಿಬಿರಗಳಲ್ಲಿರುವವರಿಗೆ ಇಫ್ತಾರ್ ಸಮಯದಲ್ಲಿ ಆಹಾರ ಕಿಟ್ಗಳನ್ನು ವಿತರಿಸುವುದು, 2018 ರಲ್ಲಿ ಕೇರಳ ಕಂಡ ಶತಮಾನದ ಅತಿದೊಡ್ಡ ಪ್ರವಾಹದ ಸಮಯದಲ್ಲಿ ಸಹಾಯಹಸ್ತ ಚಾಚಿದ್ದರು.
ಹಾಗಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಕೇರಳಿಗರನ್ನು ವಾಪಸ್ ಕಳುಹಿಸಲು ಚಾರ್ಟರ್ ಫ್ಲೈಟ್ಗಳ ವಿಷಯ ಬಂದಾಗ, ಕೃಷ್ಣಕುಮಾರ್ ಹೆಜ್ಜೆ ಹಾಕಿದರು. ಅವರು ಆರಂಭದಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಆರು ವ್ಯಕ್ತಿಗಳಿಗೆ ಟಿಕೆಟ್ ಪ್ರಾಯೋಜಿಸಲು ಯೋಚಿಸಿದರು. ಬಳಿಕ, ಎಕೆಸಿಎಎಫ್ 191 ಪ್ರಯಾಣಿಕರಿಗೆ ಪೂರ್ಣ ವಿಮಾನ ಹಾರಾಟ ಮಾಡಲು ನಿರ್ಧರಿಸಿದಾಗ, ಅವರಲ್ಲಿ 55 ಜನರಿಗೆ ಟಿಕೆಟ್ ಪ್ರಾಯೋಜಿಸಲು ಒಪ್ಪಿಕೊಂಡರು. ಜುಲೈ 25 ರಂದು, 191 ಪ್ರಯಾಣಿಕರನ್ನು ಹೊತ್ತ ದುಬೈ ವಿಮಾನವು ದುಬೈನಿಂದ ಹೊರಟಿತು, ಕೆಲವು ಗಂಟೆಗಳ ನಂತರ ಸುರಕ್ಷಿತವಾಗಿ ಕೊಚ್ಚಿಗೆ ಇಳಿಯಿತು. ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾಗಿ ಉದ್ಯೋಗದಲ್ಲಿರುವ ಕೃಷ್ಣಕುಮಾರ್ ಅವರು ತಮ್ಮ ಕೊಡುಗೆಗಳನ್ನು ‘ಸಾಮೂಹಿಕ ಪ್ರಯತ್ನದ’ ಒಂದು ಭಾಗವೆಂದು ಕರೆಯುತ್ತಾರೆ.
‘ಇದು ಸಾಮೂಹಿಕ ಪ್ರಯತ್ನವಾಗಿತ್ತು. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು. ಆ ದಿನ ಮನೆಗೆ ವಾಪಸಾಗಿದ್ದ ಜನರು ಹೆಚ್ಚಾಗಿ ಉದ್ಯೋಗ ಕಳೆದುಕೊಂಡವರು ಮತ್ತು ವೈದ್ಯಕೀಯ ತುರ್ತುಸ್ಥಿತಿ ಹೊಂದಿದವರು. ನೀವು ಏನೇ ಹೇಳಿದರೂ ಕೇರಳ ನಮ್ಮೆಲ್ಲರಿಗೂ ನೆಲೆಯಾಗಿದೆ ಮತ್ತು ಅವರು ಮನೆಗೆ ಹೋಗಲು ಅರ್ಹರು ಎಂದು ಕೃಷ್ಣಕುಮಾರ್ ಹೇಳಿದರು.
ತಮ್ಮ ಎಂಜಿನಿಯರಿಂಗ್ ದಿನಗಳಲ್ಲಿ, ಕೇರಳದ ಬುಡಕಟ್ಟು ಕುಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯ ಸಮುದಾಯಗಳಿಗೆ ಮನೆಗಳನ್ನು ನಿರ್ಮಿಸಿ, ಕೊಳಗಳನ್ನು ಸ್ವಚ್ಛ ಗೊಳಿಸಿದ್ದನ್ನು ನೆನಪಿಸಿಕೊಂಡ ಅವರು ನನ್ನ ಇಬ್ಬರು ಪುತ್ರರಿಗೂ ಹಣವು ಎಲ್ಲವೂ ಅಲ್ಲ ಎಂದು ಕಲಿಸಿದ್ದೆ , ಮಾನವ ಜೀವನದ ಮೌಲ್ಯ ಯಾವಾಗಲೂ ಇರಬೇಕು ಎಂದು ಅವರಿಗೆ ಹೇಳುತ್ತಿದ್ದೆ ಎಂದು ಹೇಳಿದರು.
ಕಳೆದ ವರ್ಷ ಕ್ರಿಸ್ಮಸ್ನಲ್ಲಿ, ದುಬೈನಲ್ಲಿರುವ ತಮ್ಮ ಮನೆಯ ಅರ್ಧ ಕಿಲೋಮೀಟರ್ ದೂರದಲ್ಲಿ ಕಾರು ಅಪಘಾತದಲ್ಲಿ ಅವರ ಕಿರಿಯ ಮಗ ರೋಹಿತ್ (19) ಮೃತಪಟ್ಟಾಗ ಅವರು ಕುಸಿದು ಹೋಗಿದ್ದರು. ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ರೋಹಿತ್ ಯುಎಸ್ ನಿಂದ ಆಗಮಿಸಿದ ಒಂದು ದಿನದ ಬಳಿಕ ತನ್ನ ಸ್ನೇಹಿತ ಶರತ್ ಜೊತೆ ಹೊರಗೆ ಹೋದಾಗ ಅಪಘಾತ ಸಂಭವಿಸಿ ಇಬ್ಬರೂ ಮೃತಪಟ್ಟಿದ್ದರು. ಅವರ ಹಿರಿಯ ಮಗ ಯುಕೆ ವಿಶ್ವವಿದ್ಯಾಲಯವೊಂದರಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾನೆ.
ಕೇರಳದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣವನ್ನು ಪ್ರಾಯೋಜಿಸುವುದು ಸೇರಿದಂತೆ ಅವರ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಮುದಾಯಗಳು ಹಮ್ಮಿಕೊಳ್ಳುವ ಹಲವಾರು ಸೇವೆಗಳಲ್ಲಿ ತಮ್ಮನ್ನು ಕೃಷ್ಣಕುಮಾರ್ ಸಮರ್ಪಿಸಿಕೊಂಡಿದ್ದಾರೆ.