ಧಾರವಾಡ: ಕಟ್ಟಡ ದುರಂತಗಳು ನಡೆದಾಗ ಅದರ ಅವಶೇಷಗಳಡಿ ಸಿಲುಕಿದ ಜನರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಜನರನ್ನು ರೋಪ್ ಮೂಲಕ ಯಾವ ರೀತಿ ಕೆಳಗೆ ಇಳಿಸಬೇಕು ಎಂಬುದರ ಕುರಿತು ಧಾರವಾಡದಲ್ಲಿ ಎನ್ಡಿಆರ್ಎಫ್ ತಂಡ ನಡೆಸಿದ ಅಣಕು ಪ್ರದರ್ಶನ ಮೈನವಿರೇಳಿಸುವಂತೆ ಮಾಡಿದೆ.
ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಅಣಕು ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಕಟ್ಟಡ ದುರಂತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಎನ್ಡಿಆರ್ ತಂಡ ತನ್ನ ಕಾರ್ಯವೈಖರಿ ಬಗ್ಗೆ ಜನರಿಗೆ ತಿಳಿಸಿಕೊಡುವ ಪ್ರಯತ್ನ ನಡೆಸಲಾಯಿತು.
ಈ ಅಣಕು ಪ್ರದರ್ಶನವನ್ನು ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಧಾರವಾಡದಲ್ಲಿ ಕಳೆದ ಬಾರಿ ಸಂಭವಿಸಿದ ಕಟ್ಟಡ ಕುಸಿತದ ದುರಂತ ಮುಂದೆಂದೂ ಆಗಬಾರದು. ಹಾಗೇನಾದರೂ ಆದಲ್ಲಿ ಯಾವ ರೀತಿ ಬೇಗ ಪ್ರತಿಕ್ರಿಯಿಸಬೇಕು ಎಂದು ಎನ್ಡಿಆರ್ಎಫ್ ತಂಡದವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ಈ ಅಣುಕು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಎನ್ಡಿಆರ್ಎಫ್ ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ, ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಪ್ರತಿಮೂರು ವರ್ಷಕ್ಕೊಮ್ಮೆ ಪ್ರತಿ ಜಿಲ್ಲೆಗಳಲ್ಲಿ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಕಟ್ಟಡ ಕುಸಿತದಂತಹ ಘಟನೆಗಳು ನಡೆದಾಗ ಜಜ ಸಾಮಾನ್ಯರು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡುತ್ತೇವೆ.
ಅಪಾಯಕಾರಿ ಘಟನೆಗಳು ನಡೆದಾದ ಆ ಸ್ಥಳದಲ್ಲಿ ಎನ್ಆರ್ಎಫ್ ತಂಡಗಳು ಇರುವುದಿಲ್ಲ. ಸ್ಥಳೀಯವಾಗಿರುವ ರಕ್ಷಣಾ ತಂಡಗಳು ತಕ್ಷಣ ಕೈಗೊಳ್ಳಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ವಿವರಣೆ ನೀಡುತ್ತೇವೆ. ಕೆಲವೊಂದು ಸಂದರ್ಭಗಳಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಸ್ಥಳೀಯ ಆಡಳಿತಗಳು ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗದೇಹೋಗಬಹುದು. ಆಗ, ಸಾರ್ವಜನಿಕರೇ ರಕ್ಷಣಗೆ ಧಾವಿಸಬೇಕು. ಆ ಕ್ಷಣಗಳಲ್ಲಿ ಜನರ ಜೀವ ಉಳಿಸುವುದು ಪ್ರಮುಖವಾಗುತ್ತದೆ. ಆದರೆ, ರಕ್ಷಣೆಗೆ ಧಾವಿಸುವವರೂ ಕೂಡ ಯಾವುದೇ ಮುನ್ನೆಚ್ಚರಿಕೆ ವಹಿಸದೇ ರಕ್ಷಣೆಗೆ ಧಾವಿಸಿದರೆ ಅಪಾಯ ಎದುರಾಗುತ್ತದೆ.
ಅಂತಹ ಕ್ಷಣಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಅಣಕು ಪ್ರದರ್ಶನದ ಮೂಲಕ ತೋರಿಸಿ ಕೊಡುತ್ತಾ ಬಂದಿದ್ದೇವೆ. ಇದರಿಂದ ಸ್ಥಳೀಯರಿಗೆ ಒಂದು ಐಡಿಯಾ ಬರುತ್ತದೆ. ಬೆಂಗಳೂರಿನ ಆರ್ಆರ್ಸಿ ತಂಡ, ಯಾದಗಿರಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡ ಮತ್ತೊಂದು ತಂಡದಿಂದ ಅಣಕು ಪ್ರದರ್ಶನ ನಡೆಸಲಾಯಿತು ಎಂದರು.
ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎನ್ಡಿಆರ್ಎಫ್ ತಂಡದವರು ನಡೆಸಿದ ರಕ್ಷಣಾ ಕಾರ್ಯವನ್ನು ಧಾರವಾಡದ ಜನತೆ ನೋಡಿ ಕಣ್ತುಂಬಿಕೊಂಡರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel