ಬೆಂಗಳೂರು: ಸಂಕಷ್ಟದ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಹಕಾರ ನೀಡಿದೆ. ಆದರೆ ಸರ್ಕಾರ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಬಾಣ ಬಿಟ್ಟಿದ್ದಾರೆ.
ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರವಾಗಿದ್ದೇವೆ ಹೊರತು ಸರ್ಕಾರದ ಪರ ಅಲ್ಲ ಎಂದಿದ್ದಾರೆ.
ಸಂಕಷ್ಟದ ಕಾಲದಲ್ಲಿ ಸಹಕಾರ, ವಿರೋಧಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಹೆಚ್ಚು ಕಡಿಮೆ 3 ತಿಂಗಳು ಸುಮ್ಮನೇ ಇದ್ದೆವು. ಇಷ್ಟಾದ ಮೇಲೂ ಸರ್ಕಾರದ ಅಕ್ರಮ-ವೈಫಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಪತ್ರಗಳನ್ನಷ್ಟೇ ಬರೆದಿದ್ದೆ. ಮುಖ್ಯಮಂತ್ರಿ ಬಿಎಸ್ವೈ ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಿದೆ ಎಂದು ಟ್ವಿಟರ್ನಲ್ಲಿ ಕುಟುಕಿದ್ದಾರೆ.
ಜನತೆಯ ಕಷ್ಟ-ನಷ್ಟಕ್ಕೆ ಕಾರಣವಾದ ಪ್ರಭುತ್ವದ ಜನವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಜನ ದ್ರೋಹವಾಗುತ್ತದೆ. ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.