ಚಿಕ್ಕಮಗಳೂರು: ಲಾಂಗ್ ಬೀಸಿದ ರೌಡಿ ಶೀಟರ್ (Rowdy Sheeter) ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್‌ಆರ್‌ಪುರ (NR Pura) ತಾಲೂಕಿನ ಬಾಳೆಹೊನ್ನೂರು ಹತ್ತಿರದ ಮಾಗಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಗಲು ಗ್ರಾಮದ ಪೂರ್ಣೇಶ್ ಎಂಬ ವ್ಯಕ್ತಿಯ ಮೇಲೆ 8 ಪ್ರಕರಣಗಳು ದಾಖಲಾಗಿದ್ದವು. 4 ಹಾಫ್ ಮರ್ಡರ್ ಕೇಸ್, 3 ಹಲ್ಲೆ ಪ್ರಕರಣ ಹಾಗೂ ಮತ್ತೊಂದು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದ್ದವು.
ಹೀಗಾಗಿ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿದ್ದರೂ ಕೋರ್ಟ್ ಗೆ ಹಾಜರಾಗಿರಲಿಲ್ಲ. ಇನ್ನೊಂದೆಡೆ ಆತ ಮನೆಗೂ ಹೋಗುತ್ತಿರಲಿಲ್ಲ. ರಾತ್ರಿ ಸಂದರ್ಭದಲ್ಲಿ ಕಾಡು, ಕಾಫಿ ತೋಟ, ಕಾಡಿನ ದೊಡ್ಡ ದೊಡ್ಡ ಮರಗಳ ಮೇಲೆ ಮಲಗಿ ಪೊಲೀಸರಿಂದಲೂ ತಪ್ಪಿಸಿಕೊಳ್ಳುತ್ತಿದ್ದ.
ಈ ಸಂದರ್ಭದಲ್ಲಿ ಆತ ಮನೆಯಲ್ಲಿರುವ ಮಾಹಿತಿಯು ಪೊಲೀಸರಿಗೆ ಸಿಕ್ಕಿತ್ತು. ಆಗ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೂ ಲಾಂಗ್ ಬೀಸಿದ್ದಾನೆ. ಆಗ ಬಾಳೆಹೊನ್ನೂರು ಸಬ್ ಇನ್ಸಪೆಕ್ಟರ್ ದಿಲೀಪ್ ಕುಮಾರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ಪೊಲೀಸ್ ಪೇದೆ ಮಂಜುನಾಥ್ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಪೇದೆ ಮಂಜುನಾಥ್ ಅವರ ಎಡಗೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗಾಗಿ ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಬಲಗಾಲಿನ ಮಂಡಿಗೆ ಗುಂಡು ಹಾರಿಸಿ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.








