ಲಂಡನ್, ಮೇ 22 : ಕೊರೋನಾ ವೈರಸ್ ಸೋಂಕನ್ನು ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೋಕ್ವಿನ್ ಎಂಬ ಔಷಧಿಗಳು ತಡೆಗಟ್ಟ ಬಹುದೇ ಎಂಬ ಬಗ್ಗೆ ತಿಳಿಯಲು ಬ್ರೈಟನ್ ಮತ್ತು ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನವೊಂದು ಪ್ರಾರಂಭವಾಗಿದೆ. ಯೂರೋಪ್, ಆಫ್ರಿಕ, ಏಶ್ಯ ಮತ್ತು ದಕ್ಷಿಣ ಅಮೆರಿಕದ ಕೋವಿಡ್-19 ರೋಗಿಗಳೊಂದಿಗೆ ಸಂಪರ್ಕದಲ್ಲಿರುವ ಸುಮಾರು 40,000ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಕ್ಲೋರೋಕ್ವಿನ್, ಹೈಡ್ರೋಕ್ಸಿಕ್ಲೋರೋಕ್ವಿನ್ ಅಥವಾ ಪ್ಲೇಸ್‌ಬೊ ಎಂಬ ಔಷಧಿಗಳನ್ನು ನೀಡಲಾಗುತ್ತಿದೆ.
ಗುರುವಾರದಿಂದ ಬ್ರೈಟನ್ ಮತ್ತು ಸಸೆಕ್ಸ್ ಯೂನಿವರ್ಸಿಟಿ ಆಸ್ಪತ್ರೆಗಳಲ್ಲಿ ಹಾಗೂ ಜಾನ್ ರಾಡ್‌ಕ್ಲಿಫ್ ಆಸ್ಪತ್ರೆಯಲ್ಲಿ ಬ್ರೈಟನ್ ಮತ್ತು ಆಕ್ಸ್‌ಫರ್ಡ್‌ನಲ್ಲಿ ನಡೆಸುವ ಅಧ್ಯಯನಕ್ಕೆ ಒಳಪಡುವ ಬ್ರಿಟನಿನವರನ್ನು ನೋಂದಾಯಿಸಲಾಗುತ್ತಿದ್ದು, ಅವರಿಗೆ ಮೂರು ತಿಂಗಳ ಸಮಯ ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಅಥವಾ ಔಷಧಿ ನೀಡಲಾಗುವುದು. ಏಶಿಯಾ ತಾಣಗಳ ಅಧ್ಯಯನದಲ್ಲಿ ಪಾಲ್ಗೊಳ್ಳುವವರಿಗೆ ಕ್ಲೋರೋಕ್ವಿನ್ ಅಥವಾ ಪ್ಲೇಸ್‌ಬೊ ಔಷಧಿ ನೀಡಲಾಗುವುದು. ಇಂಗ್ಲೆಂಡ್‌ನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆ ಅಥವಾ ಉಪಚಾರದಲ್ಲಿ ತೊಡಗಿರುವ, ಕೊರೊನಾ ಸೋಂಕು ತಗುಲಿರದ ಯಾರು ಬೇಕಿದ್ದರೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇದರಿಂದ ಕೊರೊನಾ ವೈರಸ್ ಸೋಂಕು ಹರಡುವ ಅಪಾಯ ಎದುರಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಔಷಧಿಗಳು ರಕ್ಷಣೆ ನೀಡುವಲ್ಲಿ ನೆರವಾಗಬಲ್ಲದೇ ಎಂಬುದು ಇದರಿಂದ ಸ್ಪಷ್ಟವಾಗಲಿದೆ. ಈ ವರ್ಷಾಂತ್ಯದ ವೇಳೆಯಲ್ಲಿ ಅಧ್ಯಯನದ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದ್ದು, ಬ್ರಿಟನಿನ ಸುಮಾರು 25. ತಾಣಗಳಲ್ಲಿ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ. ಅಧ್ಯಯನದಲ್ಲಿ ಬ್ರಿಟನ್, ಥಾಯ್‌ಲ್ಯಾಂಡ್, ವಿಯೆಟ್ನಾಂ ,ಲಾವೋಸ್, ಕಾಂಬೋಡಿಯ ಮತ್ತು ಇಟಲಿಯ ಸಂಶೋಧಕರು ಪಾಲ್ಗೊಂಡಿದ್ದು ಪ್ರೊ| ನಿಕೋಲಸ್ ವೈಟ್ ಅವರು ಅಧ್ಯಯನದ ನೇತೃತ್ವ ವಹಿಸಿದ್ದಾರೆ.
ಪ್ರೊ| ನಿಕೋಲಸ್ ವೈಟ್ ಅವರು ಈ ಬಗ್ಗೆ ಮಾತನಾಡಿದ್ದು, ಕ್ಲೋರೋಕ್ವಿನ್ ಅಥವಾ ಹೈಡ್ರೋಕ್ಸಿಕ್ಲೋರೋಕ್ವಿನ್ ಅಥವಾ ಪ್ಲೇಸ್‌ಬೊ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಪರಿಣಾಮಕಾರಿಯೇ ಅಥವಾ ಹಾನಿಕಾರಿಯೇ ಎಂದು ನಮಗೆ ತಿಳಿದಿಲ್ಲ. ಆದರೆ ಈ ಅಧ್ಯಯನ ಅದನ್ನು ತಿಳಿದುಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊರೋನಾ ವೈರಸ್ ಸೋಂಕಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯಲು ದೀರ್ಘ ಸಮಯ ಬೇಕಾಗಬಹುದು. ಆದರೆ, ಕ್ಲೋರೊಕ್ವಿನ್ ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್‌ನಂಥ ಮಾತ್ರೆಗಳಿಂದ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಸಾಧ್ಯವಾದರೆ ಅದು ಬಹಳಷ್ಟು ನೆರವಾಗಲಿದೆ ಎಂದು ಬ್ರೈಟನ್ ಆಯಂಡ್ ಸಸೆಕ್ಸ್ ಮೆಡಿಕಲ್ ಸ್ಕೂಲ್‌ನ ಪ್ರೊ| ಮಾರ್ಟಿನ್ ಲ್ಯೂವ್‌ಲಿನ್ ಹೇಳಿದ್ದಾರೆ.
ಕ್ಲೋರೊಕ್ವಿನ್, ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಲೇಸ್‌ಬೊನಂಥ ಔಷಧಗಳು ಮಲೇರಿಯಾ ಚಿಕಿತ್ಸೆಗೆ ಬಳಸಲಾಗುತ್ತಿದ್ದು, ಇವು ಜ್ವರ ಮತ್ತು ಉರಿಯೂತವನ್ನು ಕಡಿಮೆಗೊಳಿಬಲ್ಲವು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿನಿತ್ಯ ಹೈಡ್ರೋಕ್ಸಿಕ್ಲೋರೋಕ್ವಿನ್ ಎಂಬ ಔಷಧಿಯನ್ನು ಸೇವಿಸುವುದಾಗಿ ತಿಳಿಸಿದ್ದರು.
ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕಿಗೆ ಇನ್ನೂ ಯಾವುದೇ ಔಷಧಿ ಕಂಡು ಹಿಡಿದಿಲ್ಲ ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಇದರ ಸೇವನೆಯಿಂದ ಹೃದಯಕ್ಕೆ ಅಪಾಯವುಂಟಾಗಬಹುದೆಂದು ಎಚ್ಚರಿಕೆ ನೀಡಿದೆ








