ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 13 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾವೇರಿ (Accident in Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಹತ್ತಿರದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ನಿದ್ದಪ್ಪ(45), ಶರಣು (40), ಯಲ್ಲಪ್ಪ (50), ನಾಗೇಶ್ (40), ನಾಗೇಶ್ (18) ಯಲ್ಲಪ್ಪ (65), ಗಣೇಶಪ್ಪ (65), ರಂಗನಾಥ ಸ್ವಾಮಿ (62) ಮತ್ತು ಇವರ 6 ಮತ್ತು 4 ವರ್ಷದ ಇಬ್ಬರು ಮಕ್ಕಳು, ಚಾಲಕ ನಾಗೇಶ್ (23), ಶರಣಪ್ಪ (24), ಪರಶುರಾ (40), ಮಂಜುಳಾ ರಾಮಕೃಷ್ಣ (50) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿದವರೆಲ್ಲ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಹತ್ತಿರದ ಎಮ್ಮಿಹಟ್ಟಿ ಗ್ರಾಮದವರು ಎನ್ನಲಾಗಿದೆ. ಇವರೆಲ್ಲ ಟಿಟಿ ವಾಹನದಲ್ಲಿ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಮರಳಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಭಕ್ತರಿದ್ದ ಟಿಟಿ ವಾಹನವು ಚಾಲಕನ ನಿರ್ಲಕ್ಷ್ಯದಿಂದಾಗಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.