ಕೋಲಾರ: ಜಿಲ್ಲೆಯ ಬಂಗಾರಪೇಟೆ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದ್ದು, ಶಾಲೆಗೆ ಹಾನಿಯಾಗಿದೆ. ಆದರೆ, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಈ ಘಟನೆ ಜಿಲ್ಲೆಯ ಬಂಗಾರಪೇಟೆ (Bangarapete) ಪಟ್ಟಣದ ಮುದಲಿಯಾರ್ ಬಡವಾಣೆಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಬೂದಿಕೋಟೆ ರಾಜ್ಕುಮಾರ್ ಎಂಬುವವರಿಗೆ ಸೇರಿದ ಕಟ್ಟಡ ಏಕಾಏಕಿ ಕುಸಿದಿದೆ. ಇತ್ತೀಚೆಗೆ ಈ ಕಟ್ಟಡ ವಾಲಿದೆ. ಇದು ವಾಲುತ್ತಿದ್ದಂತೆ ಮನೆಯಲ್ಲಿದ್ದ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಪಕ್ಕದಲ್ಲಿದ್ದ ಶಾಲೆಯ ಗೋಡೆಗೆ ಹಾನಿಯಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿಗಳ ಮುಖಾಂತರ ರಸ್ತೆಯಲ್ಲಿರುವ ಗೋಡೆಯ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೆಲಮಹಡಿಯ ಮನೆಯ ನವೀಕರಣ ವೇಳೆ ಗೋಡೆ ಕುಸಿದಿದೆ. ಕಟ್ಟಡ ಕುಸಿತದ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೆಲವೇ ಕ್ಷಣದಲ್ಲಿ ಮನೆಯಲ್ಲಿದ್ದ ಮೂರು ಕುಟುಂಬಗಳನ್ನು ಖಾಲಿ ಮಾಡಿಸಿದ್ದಾರೆ. ಹೀಗಾಗಿ ದೊಡ್ಡ ದುರಂತ ಸಂಭವಿಸಿಲ್ಲ.
ಮನೆಯ ಮಾಲೀಕನಿಗೆ ಕಟ್ಟಡದ ಕುರಿತು ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.