ಅದು 1991ರ ಸೆಪ್ಟೆಂಬರ್ ಮಾಹೆಯ 19 ನೇ ತಾರೀಕು. ಈ ತಾರೀಕು ಯೂರೋಪಿನ ಒಂದು ಐತಿಹಾಸಿಕ ಶೋಧಕ್ಕೆ ಸಾಕ್ಷಿಯಾದ ದಿನ. ಸ್ವಿಜರ್ ಲೆಂಡ್ ಮೂಲದ ದಂಪತಿಗಳಾದ ಹೆಲ್ಮುಟ್ ಹಾಗೂ ಎರಿಕಾ ಸೈಮನ್ ಈ ಇಬ್ಬರೂ ಟ್ರೆಕ್ಕಿಂಗ್ ಮಾಡುವಾಗ ಈಗಿನ ಆಸ್ಟ್ರಿಯಾ ಹಾಗೂ ಇಟಲಿಗಳ ನಡುವಿನ ಗಡಿ ಭಾಗದಲ್ಲಿ ಅಲ್ಲಿನ ಈಶಾನ್ಯ ಭಾಗದ ಓಟ್ಜ಼ಲ್ (Otzal alps) ತಪ್ಪಲುಗಳ ಮಂಜುಗಡ್ಡೆಯಿಂದಾವೃತವಾದ ಬಂಡೆಯೊಂದರ ಕೆಳಗೆ ಕೃಶವಾಗಿದ್ದ ಒಂದು ಮಾನವ ದೇಹವನ್ನ ಪತ್ತೆ ಮಾಡಿದ್ದರು.
ಪರ್ವತಾರೋಹಣ ಮಾಡುತ್ತಿದ್ದ ಈ ದಂಪತಿಗಳಿಗೆ ಬಹು ಅಚಾನಕ್ಕಾಗಿ ಅಲ್ಲಿದ್ದ ಆ ಮಾನವ ದೇಹ ಅಥವಾ ಮೂಳೆ ಗಮನಕ್ಕೆ ಬರುತ್ತೆ. ಯಾರೋ ನಮ್ಮಂತೆ ಪರ್ವತಾರೋಹಣಕ್ಕೆ ಬಂದು ಪ್ರಾಣ ಕಳೆದುಕೊಂಡಿರಬೇಕೆಂದು ಮೊದಲಿಗೆ ಭಾವಿಸಿದ ಅವರು ಈ ಬಗ್ಗೆ ಸ್ಥಳೀಯ ಅಥಾರಿಟಿಗಳಿಗೆ ತಿಳಿಸುತ್ತಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಥಾರಿಟಿಗಳಿಗೆ ಈ ಮಾನವ ದೇಹ ವಿಚಿತ್ರವಾಗಿ ಕಾಣಿಸುತ್ತದೆ. ಅವರು ಪ್ಯಾಥೋಲಜಿ ವಿಭಾಗಕ್ಕೆ ಈ ಸುದ್ದಿ ತಿಳಿಸಿ ಅವರಿಂದಲೇ ಈ ದೇಹವನ್ನ ಹೊರತೆಗೆಸಿ ಪೋಸ್ಟ್ ಮಾರ್ಟಮ್ ಗೆ ಒಪ್ಪಿಸುತ್ತಾರೆ.
ಪ್ಯಾಥೋಲಜಿಯ ತಂಡದವರು ಕಲ್ಲಿನ ಕೆಳಗೆ ಸಿಲುಕಿದ್ದ ಈ ಜರ್ಝರಿತ ದೇಹವನ್ನ ಸಲಾಕೆಗಳಿಂದ ಎಬ್ಬಿಸುವಾಗ ಅದರ ಮುಖದ ಒಂದು ಪಾರ್ಶ್ವದ ಮೂಳೆ ಹಾಗೂ ಕೈ ಮುರಿದು ಹೋಗುತ್ತದೆ. ತಮ್ಮ ವಶಕ್ಕೆ ಪಡೆದು ಪರೀಕ್ಷಿಸಿದ ವಿಭಾಗಕ್ಕೆ ಆಶ್ಚರ್ಯವೊಂದು ಕಾದಿತ್ತು. ಆರು ತಿಂಗಳಿನದೊ ವರ್ಷದ್ದೊ ಎಂದು ಅವರು ಭಾವಿಸಿದ್ದ ಈ ದೇಹ ಬರೋಬ್ಬರಿ 5300 ವರ್ಷಗಳಷ್ಟು ಹಳೆಯದ್ದಾಗಿತ್ತು. ಹೌದು! ಹೆಲ್ಮುಟ್ ಹಾಗೂ ಎರಿಕಾ ತಾಮ್ರ ಯುಗದ ವ್ಯಕ್ತಿಯೊಬ್ಬನ ಮೃತದೇಹವನ್ನ ಪತ್ತೆ ಹಚ್ಚಿ ದಾಖಲೆ ಬರೆದಿದ್ದರು. ಇತಿಹಾಸದ ರೋಚಕತೆಗೆ ಸಿಕ್ಕ ಒಂದು ಅತ್ಯಮೂಲ್ಯ ಹಾಗೂ ಶಕ್ತಿಯುತ ಸಾಕ್ಷ್ಯವಾದ ಇದರ ಮುಂದಿನ ಪ್ರಯೋಗಗಳ ವರದಿಗಳಿಗೆ ಅವರು ಕಾತುರದಿಂದ ಕಾದರು.
ಇದು ಎರಡು ರಾಷ್ಟ್ರಗಳ ಮಧ್ಯದ ಓಟ್ಜ಼ಲ್ ತಪ್ಪಲಿನಲ್ಲಿ ಸಿಕ್ಕಿದ್ದರಿಂದ ಈ ಮೃತ ಮಾನವನಿಗೆ ಓಟ್ಜಿ಼ ಎಂದೆ ಹೆಸರಿಡಲಾಯ್ತು. ಯೂರೋಪಿನ ಮೊದಲ ಹಾಗೂ ಅತಿ ಪುರಾತನ ಮಾನವ ಎಂದೆ ಹೆಸರಾದ ಈ ಓಟ್ಜಿ಼ಯ ಬಗ್ಗೆ ತುಸು ತಿಳಿಯೋಣ ಬನ್ನಿ.
ಈ ಓಟ್ಜಿ಼ ಈಗಿನ ಆಸ್ಟ್ರಿಯಾ ಹಾಗೂ ಇಟಲಿಗಳೆರಡಕ್ಕೂ ಸೇರುವ ಓಟ್ಜ಼ಲ್ ಬೆಟ್ಟದಲ್ಲಿ ಶವವಾಗಿ ಸಿಕ್ಕಿದ್ದ. ಯಾರು ಈ ಓಟ್ಜಿ಼ ? ಅಲ್ಲೇಕೆ ಸತ್ತು ಬಿದ್ದಿದ್ದ ? ಇವನು ನಿಜವಾಗಿಯೂ ಸಾವಿರಾರು ವರ್ಷಗಳಷ್ಟು ಪುರಾತನನೆ ? ಹೌದಾದರೆ ಇಷ್ಟು ಧೀರ್ಘಾವಧಿಯಲ್ಲಿ ಅವನ ಶವ ಕೆಡದೆ, ಕೊಳೆಯದೆ ಅಷ್ಟು ಪೂರ್ಣ ಪ್ರಮಾಣದಲ್ಲಿ ಸಂರಕ್ಷಿಸಲ್ಪಟ್ಟಿದ್ದಾದರೂ ಹೇಗೆ ಈ ಎಲ್ಲ ಪ್ರಶ್ನೆಗಳೂ ಸಹ ಅವನು ಸಿಕ್ಕಾಗ ಬಹುತೇಕ ಎಲ್ಲರಲ್ಲು ಮೂಡಿದ್ದವು. ಇದೇ ದಿಕ್ಕಲ್ಲಿ ಸಂಶೋಧನೆ ನಡಿಸಿದ ತಜ್ಞರಿಗೆ ನಿಧಾನವಾಗಿ ಈ ಎಲ್ಲ ಗೊಂದಲಗಳಿಗು ಸಮಾಧಾನಕರ ಉತ್ತರಗಳು ಸಿಕ್ಕವು. ಈ ಓಟ್ಜಿ಼ ಸುಮಾರು ಕ್ರಿ.ಪೂ 3400 – 3300ರ ನಡುವೆ ಜೀವಿಸಿದ್ದ ತಾಮ್ರ ಯುಗದ ವ್ಯಕ್ತಿ. ಈತ ಸತ್ತಾಗ ಈತನಿಗೆ ಸುಮಾರು 45 ವರ್ಷಗಳ ಪ್ರಾಯ ಎಂದು ತನಿಖೆಗಳ ವರದಿಗಳು ಹೇಳಿವೆ.
ಈಗಿರುವ ಟೈರೋಲ್ ಪ್ರಾಂತ್ಯದಲ್ಲಿ ವಾಸವಿದ್ದ ಈ ವ್ಯಕ್ತಿ ಒಬ್ಬ ಕುರಿಗಾಹಿ ಇದ್ದಿರಬೇಕೆಂದೂ ಈತ ದೂರ ಪ್ರಯಾಣ ಮಾಡುವಾಗ ಕಾರಣಾಂತರಗಳಿಂದ ಪೆಟ್ಟು ತಿಂದ ಪರಿಣಾಮ ಅತಿಯಾದ ರಕ್ತಸ್ರಾವದಿಂದ ಬಳಲಿ ಪ್ರಾಣ ಬಿಟ್ಟಿದ್ದಾನೆ ಎಂದು ಅಂದಾಜಿಸಲಾಗಿದೆ. ಈತ 5.6 ಅಡಿ ಎತ್ತರವಿದ್ದು ಕಾಲುಗಳಿಗೆ ಚರ್ಮದ ಬೂಡ್ಸುಗಳನ್ನ ಹಾಕಿದ್ದ. ಚಳಿಯಿಂದ ರಕ್ಷಿಸಿಕೊಳ್ಳಲು ಕರಡಿ ಹಾಗೂ ಜಿಂಕೆಯ ಚರ್ಮಗಳಿಂದ ನೇಯ್ದ ದೊಡ್ಡ ಜಾಕೆಟ್ಟನ್ನ ಧರಿಸಿದ್ದ. ಈತನ ಬಳಿ ಹದಿನಾಲ್ಕು ಮರದ ತೆಳು ಬಾಣಗಳು ಪತ್ತೆಯಾಗಿದ್ದು. ಪ್ರತಿಬಾಣಗಳ ತುದಿಗೂ ಕಲ್ಲಿನ ಚೂಪುಗಳನ್ನ ಕಟ್ಟಲಾಗಿದೆ.
ಈತನ ಬಳಿ ಒಂದು ಮರ ಹಾಗೂ ಕಲ್ಲಿನ ಕೊಡಲಿ ಸಹ ಸಿಕ್ಕಿದೆ. ಬೂಡ್ಸುಗಳ ಒಳಗೆ ಸಣ್ಣ ಸಣ್ಣ ಕಲ್ಲಿನ ಹಾಗೂ ಕೋಲಿನ ದರ್ಭೆ ಮತ್ತು ದಬ್ಬಳದಂಥ ಟೂಲ್ಸ್ ಗಳೂ ಹಾಗೂ ಅವುಗಳನ್ನ ಇಡುವ ಜೇಬುಗಳೂ ಇದ್ದು ಬೂಡ್ಸುಗಳನ್ನ ಹಲವು ಕೆಲಸಗಳಿಗೆ ಬಳಕೆಯಾಗುವಂತೆ ಹೊಲಿಯಲಾಗಿತ್ತು. ಇದು ಈತನಿದ್ದ ಕಾಲದಲ್ಲಿ ಬಟ್ಟೆ ಹಾಗೂ ಬೂಡ್ಸುಗಳನ್ನ ಹೊಲೆದು ಕೊಡುವ ಶ್ರಮಿಕ ವರ್ಗವೂ ಇತ್ತೆನ್ನುವುದಕ್ಕೆ ಒಂದು ಸುಸ್ಪಷ್ಟ ಸಾಕ್ಷಿ. ಈತನ ಕೋಟಿನ ಒಳಗೆ ಜೇಬುಗಳಲ್ಲಿ ಗೋಧಿ ಹಾಗೂ ಬಾರ್ಲಿಯಿಂದ ಮಿಶ್ರಿತವಾದ ಬ್ರೆಡ್ ಚೂರು, ಒಣ ಬೆರ್ರಿಗಳು ಹಾಗೂ ಒಂದಷ್ಟು ಔಷಧೀಯ ಗಿಡಮೂಲಿಕೆಗಳೂ ಸಿಕ್ಕಿವೆ.
ಬೂಡ್ಸುಗಳ ಒಳಗೆ ಸ್ವಲ್ಪ ಪ್ರಮಾಣದ ಒಣ ಹುಲ್ಲಿನ ಕಟ್ಟೂ ಸಹ ಪತ್ತೆಯಾಗಿದ್ದು ಈತ ಅದನ್ನ ಬಹುಶಃ ದಾರಿಯಲ್ಲಿ ಚಳಿ ಕಾಯಿಸಲು ಬೆಂಕಿ ಹೊತ್ತಿಸಲು ತಂದಿದ್ದಿರಬೇಕು. ಅವನ ಜೇಬಿನಲ್ಲಿ ಸ್ವಲ್ಪ ಪ್ರಮಾಣದ ಮಾಂಸದ ತುಣುಕುಗಳೂ ಸಹ ಪತ್ತೆಯಾಗಿವೆ. ಪರಿಶೀಲಿಸಿದಾಗ ಇದು ಅಲ್ಲಿನ ಐಬೆಕ್ಸ್ ಹಾಗೂ ಕುರಿಯ ಮಾಂಸವೆಂದು ತಿಳಿದು ಬಂತು. ಇನ್ನು ಈತನ ಕೈ ತೋಳಿನ ಮೇಲೆ ಬಾಣದ ಏಟಿನ ಗುರುತಿದ್ದು. ಯಾರೋ ಆಗಂತುಕರ ಬಾಣದ ಏಟಿಗೆ ಈತ ಗುರಿಯಾಗಿದ್ದು ಅವರನ್ನ ಎದುರಿಸಿ ಅಥವಾ ಅವರಿಂದ ತಪ್ಪಿಸಿಕೊಂಡು ಬಂದು ಓಟ್ಜ಼ಲ್ ಬೆಟ್ಟದಲ್ಲಿ ಬಸವಳಿದು ಪ್ರಾಣ ಬಿಟ್ಟಿದ್ದಾನೆ. ಅಥವಾ ಇಲ್ಲಿನ ಶೀತ ಮಾರುತದ ಹೊಡೆತ ತಾಳದೆ ಸತ್ತಿದ್ದಾನೆ.
ಇಲ್ಲಿನ ನೈಸರ್ಗಿಕವಾದ ಶೀತ ವಾತಾವರಣವು ಅವನ ದೇಹವನ್ನ ಭರ್ತಿ ಐದೂವರೆ ಸಾವಿರ ವರ್ಷಗಳ ಕಾಲ ಸುಸ್ಥಿತಿಯಲ್ಲಿಟ್ಟು ಸಂರಕ್ಷಿಸಿದೆ. ಅಲ್ಲಿನ ಶೀತದಿಂದಾಗಿ ಯಾವ ಮಾಂಸಾಹಾರಿ ಪ್ರಾಣಿಯಾಗಲೀ ಅಥವಾ ಮಾಂಸ ತಿನ್ನುವ ಕೀಟವಾಗಲೀ ಅವನ ದೇಹದ ಬಳಿ ಸುಳಿದಿಲ್ಲ. ಹೀಗಾಗಿ ಓಟ್ಜಿ಼ಯ ದೇಹ ಇಷ್ಟು ಸುದೀರ್ಘಾವಧಿಯ ಕಾಲ ಬಂಡೆ ಕೆಳಗೆ ಮಲಗಿ ಕ್ರಮೇಣ ಮಮ್ಮಿಫೈ ಆಗಿದೆ. ಈತ ಪ್ರಾಣ ಬಿಡುವ ಮುನ್ನ ಎರಡೆ ಗಂಟೆಯ ಮುಂಚೆಯಷ್ಟೆ ಆಹಾರ ಸೇವಿಸಿದ್ದು ಅವನ ಜಠರದಲ್ಲಿ ಅರೆ ಬರೆ ಜೀರ್ಣವಾಗಿದ್ದ ಐಬೆಕ್ಸ್ ಹೋತದ ಮಾಂಸ, ಒಂದಷ್ಟು ಗೋಧಿ ಕಾಳು ಹಾಗೂ ಬೆರ್ರಿಗಳು ಇದ್ದುದು ಪರೀಕ್ಷೆಗಳ ಮೂಲಕ ಕಂಡು ಬಂತು.
ಅಲ್ಲಿನ ಶೈತ್ಯೀಕರಣವು ಅವನ ದೇಹವನ್ನ ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲು ರಕ್ಷಿಸಿತ್ತು. ಅವನ ರಕ್ತನಾಳಗಳು, ಹೃದಯ, ಶ್ವಾಸಕೋಶ, ಕಿಡ್ನಿ ಹಾಗೂ ಕರುಳಿನ ಅಂಗಗಳೆಲ್ಲ ಅಚ್ಚರಿಯೆನಿಸುವಷ್ಟು ಉತ್ತಮ ಸ್ಥಿತಿಯಲ್ಲಿದ್ದುವಲ್ಲದೆ ಒಡ್ಡಲಾದ ಎಲ್ಲಾ ಪರೀಕ್ಷೆಗಳಿಗು ಸಹಕರಿಸಿದವು. ಓಟ್ಜಿ಼ಯ ಸಾವಿಗೆ ಖಚಿತ ಕಾರಣ ಸಿಕ್ಕಿಲ್ಲ. ಆಗಂತುಕರ ದಾಳಿಗೆ ಅಥವಾ ಮಾನವ ಬಲಿಗೆ ಅವನು ಒಳಗಾಗಿರಬಹುದೆಂದು ಅಂದಾಜಿಸಲಾಗಿದೆ. ಈಗ ಅವನ ದೇಹವನ್ನ ಅಲ್ಲಿನ ಆಸ್ಟ್ರಿಯಾದ ಟೈಲೋರ್ ನ ಮ್ಯೂಸಿಯಂನಲ್ಲಿ ರಕ್ಷಿಸಿಟ್ಟಿದ್ದಾರೆ. ಅವನ ಇಡೀ ದೇಹವನ್ನ ರಚಿಸಿ ಅದರ ಪೂರ್ಣ ರೂಪದ ಬೊಂಬೆಯೊಂದನ್ನ ಅಲ್ಲಿ ಇಡಲಾಗಿದೆ.
ಈತ ಪ್ರಸಿದ್ಧಿಗೆ ಬಂದ ಮೇಲೆ ಆಸ್ಟ್ರಿಯಾ ಹಾಗೂ ಇಟಲಿಯ ಸರ್ಕಾರಗಳು ಈತ ತಮ್ಮವ ಎಂದು ಕಿತ್ತಾಟ ಶುರು ಮಾಡಿದವು. ವಿಚಿತ್ರವೆಂದರೆ ಓಟ್ಜಿ಼ ಇದ್ದ ಕಾಲದಲ್ಲಿ ಈ ಯಾವ ರಾಷ್ಟ್ರಗಳೂ ಹುಟ್ಟೆ ಇರಲಿಲ್ಲ. ಈಗ ಇವು ಅವನಿಗಾಗಿ ಬಡಿದಾಡುತ್ತಿರುವುದೇ ಹಾಸ್ಯಾಸ್ಪದ. ಓಟ್ಜಿ಼ಯ ಸಂಶೋಧನೆ ಅವನ ಕಾಲದ ಅನೇಕ ವಿವರಗಳನ್ನ, ಸಂಗತಿಗಳನ್ನ ಅರಿಯಲು ತಙ್ಞರಿಗೆ ಸಹಾಯ ಮಾಡಿತಲ್ಲದೆ ಇದು ಆಧುನಿಕ ಪ್ರಾಕ್ತನಶಾಸ್ತ್ರದ ಒಂದು ಮೈಲುಗಲ್ಲು ಎನ್ನಬಹುದು.
ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)
*








