ಶ್ರೀರಾಮ ಬಿಟ್ಟ ಬಾಣಕ್ಕೆ ಎರಡು ಹೋಳಾಯಿತು ಬೆಟ್ಟ
ಚಾಮರಾಜನಗರ: ಮರ್ಯಾದಾ ಪುರಷೋತ್ತಮ ಪ್ರಭು ಶ್ರೀ ರಾಮಚಂದ್ರ ಬಿಟ್ಟ ಬಾಣಕ್ಕೆ ಬೆಟ್ಟ ಎರಡು ಹೋಳಾಗಿದೆ.
ಈ ಬೆಟ್ಟ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ಪಕ್ಕದ ತಮಿಳುನಾಡಿನ ತಾಳವಾಡಿಯಿಂದ 10 ನಿಮಿಷದ ಹಾದಿಯಲ್ಲಿಯಲ್ಲಿದೆ. ಈ ಬೆಟ್ಟಕ್ಕೆ ರಾಮನ ಕಿಂಡಿ ಬೆಟ್ಟ ಎಂದು ಜನರು ಕರೆಯುತ್ತಾರೆ. ಅಲ್ಲದೇ ಇಲ್ಲಿ ಶ್ರೀರಾಮಚಂದ್ರನ ಮಂಡಿ ಗುರುತು ಇನ್ನೂ ಅಚ್ಚಳಿಯದೇ ಉಳಿದಿದೆ.
ಶ್ರೀರಾಮ ಚಂದ್ರ ತನ್ನ ವನವಾಸ ಕಾಲದಲ್ಲಿ ಒಂದು ದಿನ ಇಲ್ಲಿ ತಂಗಿದ್ದಾನೆ. ಮರುದಿನ ಹೊರಡುವ ವೇಳೆ ಎದುರಾದ ತಲ ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ, ಆತನ ತಲೆಯನ್ನ ಕತ್ತರಿಸಿಕೊಂಡು ಹೊತ್ತು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನ ಸೀಳಿದೆ ಎನ್ನುವುದು ಪ್ರತೀತಿ. ಪುರಾಣದಲ್ಲಿ ಕೇಳಿ ಬಂದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತೆ ಇದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿರುವುದನ್ನ ಕಾಣಬಹುದು.
ಪ್ರಸ್ತುತ ಈ ಸ್ಥಳವನ್ನು ತಲಮಲೈ ಎಂದು ಕರೆಯುತ್ತಾರೆ. ಇಂದಿಗೂ ಇಲ್ಲಿ ಬೇಡಿದ್ದನ್ನ ಕರುಣಿಸುತ್ತಿದ್ದಾನಂತೆ ದಶರಥ ಪುತ್ರ ಪ್ರಭು ಶ್ರೀ ರಾಮಚಂದ್ರ. ತನ್ನ ಬಳಿಗೆ ಬಂದ ಭಕ್ತರಿಗೆ ಅಭಯ ನೀಡುತ್ತಾ, ಬೇಡಿದ್ದನ್ನ ನೀಡುತ್ತಿದ್ದಾನೆ ಎಂಬುದು ಇಲ್ಲಿನ ಜನರ ನಂಬಿಕೆ.
ಪ್ರತಿ ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೇ ರಾಮ ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ಧಿಗಾಗಿ ವರ ಬೇಡಿದರೇ ಆತ ನೀಡುತ್ತಾನೆ ಎನ್ನುವುದು ನಂಬಿಕೆ.