ಮಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ದೇಶವನ್ನು ಲಾಕ್ ಡನ್ ಮಾಡಲಾಗಿತ್ತು. ಲಾಕ್ ಡೌನ್ ಸಡಿಲಗೊಂಡ ಬಳಿಕ ನಿಧಾನವಾಗಿ ವ್ಯಾಪಾರ ವಹಿವಾಟು ಶುರವಾಗಿದೆ. ಮೂರು ತಿಂಗಳ ಬಳಿಕ ಮಂಗಳೂರಿನಲ್ಲಿ ಮತ್ತೆ ವ್ಯಾಪಾರ ಶುರುವಾಗಿದೆ. ಆದರೆ ವ್ಯಾಪಾರ ಶುರು ಮಾಡಿದ್ದೇ ಪಾಲಿಕೆ ಮತ್ತು ವ್ಯಾಪಾರಸ್ಥರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.
ಮೂರು ತಿಂಗಳಿನಿಂದ ಮುಚ್ಚಿದ್ದ ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರಕ್ಕೆ ಸಿದ್ದತೆ ಮಾಡಲಾಗಿತ್ತು. ಮಂಗಳೂರಿನ ಕೇಂದ್ರ ಮಾರುಕಟ್ಟೆ ತೆರೆಯಲು ವ್ಯಾಪಾರಿಗಳು ಮುಂದಾಗಿದ್ದರು. ಮಾರುಕಟ್ಟೆಯನ್ನು ಮುಚ್ಚಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು. ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಮಾರುಕಟ್ಟೆ ಮುಚ್ಚಲು ಎಪ್ರೀಲ್ 7 ರಂದು ಪಾಲಿಕೆ ಆದೇಶ ಹೊರಡಿಸಿತ್ತು. ಆದರೆ ಆದೇಶಕ್ಕೆ ಕ್ಯಾರೆ ಅನ್ನದೆ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆಯಲು ಮುಂದಾಗಿದ್ದರು. ಹಾಗಾಗಿ ಅಂಗಡಿ ತೆರೆಯಲು ಬಂದ ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾರುಕಟ್ಟೆ ತೆರೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಾ ವ್ಯಾಪಾರಿಗಳ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ಮಂಗಳೂರು ಪಾಲಿಕೆಯ ಕಮಿಷನರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕೇಂದ್ರ ಮಾರುಕಟ್ಟೆ ಎದುರು ಭಾರೀ ಪೊಲೀಸ್ ಭದ್ರತೆ ಅಯೋಜಿಸಲಾಗಿದೆ.








