ಭರವಸೆ ಮೂಡಿಸುತ್ತಿರುವ ವೈದ್ಯರಿಗೆ ಮತ್ತು ದಾದಿಯರಿಗೆ ಬಿಗ್ ಬಿ ಧನ್ಯವಾದ ಹೇಳಿರುವ ವೀಡಿಯೋ
ಮುಂಬೈ, ಜುಲೈ 12: ಶನಿವಾರ ರಾತ್ರಿ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅವರಿಗೆ ಕೋವಿಡ್ -19 ತಗುಲಿರುವ ಸುದ್ದಿಯನ್ನು ಹಂಚಿಕೊಂಡರು. ಬಿಗ್ ಬಿ ಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಅವರ ಎಲ್ಲಾ ಕುಟುಂಬ ಸದಸ್ಯರು ಮತ್ತು ಮನೆಯ ಸಿಬ್ಬಂದಿಗಳು ಸಹ ಪರೀಕ್ಷೆಗೆ ಒಳಗಾದರು ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಇಬ್ಬರನ್ನೂ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರಿಗೂ ಬೇಗನೆ ಗುಣಮುಖರಾಗಿ ಹಿಂದಿರುಗಿ ಎಂದು ಹಾರೈಸಿದ ಸಂದೇಶಗಳು ಹರಿದಾಡುತ್ತಿವೆ. ಈ ನಡುವೆ ಬಿಗ್ ಬಿ ಅಭಿಮಾನಿಗಳು ಬಿಗ್ ಬಿ ಅಮಿತಾಬ್ ಅವರು ನಾನಾವತಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಅವರ ಸೇವೆ ಮತ್ತು ಶ್ರಮಕ್ಕಾಗಿ ಹೊಗಳಿರುವ ವೀಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ, ಬಿಳಿ ಕೋಟ್ ಧರಿಸಿದ ವೈದ್ಯರು ದೇವರ ಒಂದು ರೂಪ, ಅವರು ತಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳಿ, ಇತರರನ್ನು ಉಳಿಸುತ್ತಿದ್ದಾರೆ. ಭಯ, ಆತಂಕ ಇದ್ದರೂ ಈ ಸಮಯದಲ್ಲಿ ಭಯಭೀತರಾಗಬಾರದು ಎಂದು ಬಿಗ್ ಬಿ ಹೇಳಿದ್ದು, ನಾವೆಲ್ಲರೂ ಬೇಗನೆ ಈ ಕಷ್ಟದ ಸಮಯಗಳಿಂದ ಹೊರಬರುತ್ತೇವೆ ಎಂದು ಹೇಳಿದ್ದಾರೆ.
ಇದು ಅಮಿತಾಬ್ ಅವರ ಹಳೆಯ ವೀಡಿಯೋವಾಗಿದ್ದು, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಅಭಿಮಾನಿಗಳಿಗೆ ಭರವಸೆ ಮತ್ತು ಧೈರ್ಯವನ್ನು ನೀಡುತ್ತಿದೆ.
ಏತನ್ಮಧ್ಯೆ, ಅಮಿತಾಬ್ ಮತ್ತು ಅಭಿಷೇಕ್ ಇಬ್ಬರ ಆರೋಗ್ಯವೂ ಸದ್ಯಕ್ಕೆ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ .








