7 ವರ್ಷದ ಹಿಂದೆಯೆ ಕೋವಿಡ್ -19 ಹೋಲುವ ವೈರಸ್ ಪತ್ತೆಯಾಗಿತ್ತು – ಚೀನೀ ವಿಜ್ಞಾನಿಗಳು
ಬೀಜಿಂಗ್, ಜುಲೈ 7: ಏಳು ವರ್ಷಗಳ ಹಿಂದೆ ಚೀನಾದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೋವಿಡ್ -19 ಮಾದರಿಯನ್ನು ಹೋಲುವ ವೈರಸ್ ಗೆ ಬಲಿಯಾಗಿದ್ದರು ಎಂಬ ವರದಿಗಳು ಇದೀಗ ಬಹಿರಂಗವಾಗಿದೆ. ಶೇಕಡಾ 96 ರಷ್ಟು ಮಾರಣಾಂತಿಕ ಕೊರೋನವೈರಸ್ ಅನ್ನು ಹೋಲುವ ವೈರಸ್ ನ ಮಾದರಿಗಳನ್ನು ಚೀನಾದ ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿತ್ತು ಎಂದು ಹೊಸ ತನಿಖೆಯೊಂದು ಹೇಳಿದೆ.
ವುಹಾನ್ನಿಂದ ನೂರಾರು ಮೈಲಿ ದೂರದಲ್ಲಿರುವ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ತಾಮ್ರದ
ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಅಲ್ಲಿದ್ದ ಬಾವಲಿಯ ಮಲವನ್ನು ತೆರವುಗೊಳಿಸುವ ಕಾರ್ಯ ನಿರ್ವಹಿಸಿದ ಬಳಿಕ ಅನಾರೋಗ್ಯಕ್ಕೆ ಒಳಗಾದರು ಮತ್ತು ಅವರಲ್ಲಿ ಮೂವರು ಸಾವನ್ನಪ್ಪಿದರು.
ಅವರಲ್ಲಿ ಕಂಡು ಬಂದ ರೋಗಲಕ್ಷಣಗಳು – ಅಧಿಕ ಜ್ವರ, ಕೈಕಾಲು ನೋವು ಮತ್ತು ಉಸಿರಾಟದ ತೊಂದರೆಗಳು ಸೇರಿದಂತೆ ಸಾರ್ಸ್ ನಿಂದ ಉಂಟಾಗುವ ಒತ್ತಡಕ್ಕೆ ಸಂಬಂಧಿಸಿದ ಗುಣ ಲಕ್ಷಣಗಳು ಕಾಣಿಸಿಕೊಂಡಿತ್ತು.
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿದ ಮಾದರಿಗಳಲ್ಲಿ ಅದೇ ರೀತಿಯ ಹೋಲಿಕೆ ಇದ್ದು, ಲ್ಯಾಬ್ನ ವಿಜ್ಞಾನಿಗಳು ಬಳಿಕ ಅದನ್ನು ಜಗತ್ತನ್ನು ವ್ಯಾಪಿಸಿರುವ ಕೊರೋನವೈರಸ್ನ ಹತ್ತಿರದ ಸಂಬಂಧಿ ಎಂದು ಬಹಿರಂಗಪಡಿಸಿದ್ದರು.
ಅವರ ಚಿಕಿತ್ಸೆಯ ವಿವರಗಳನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕಿರಿಯ ವೈದ್ಯರು ಮತ್ತು ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ನಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿಯೊಬ್ಬರು ಪತ್ರಿಕೆಗಳಲ್ಲಿ ಬರೆದಿದ್ದು, ಸಾವಿಗೆ ನಿಖರವಾದ ಕಾರಣವನ್ನು ಅವರು ದೃಢೀಕರಿಸಿಲ್ಲ. ಆದರೆ ಬಾವಲಿಯಿಂದ ಹರಡಿದ ಸಾರ್ಸ್ನಂತಹ ಕೊರೊನಾ ವೈರಸ್ ಎಂದು ಸೂಚಿಸಿದ್ದರು.
ವುಹಾನ್ ಲ್ಯಾಬ್ ನ ಖ್ಯಾತ ವೈರಾಲಜಿಸ್ಟ್ ಬ್ಯಾಟ್ ವುಮೆನ್ ಎಂದೇ ಖ್ಯಾತರಾದ ಶಿ ಜೆಂಗ್ ಲಿಯವರು ಈ ವರ್ಷದ ಫೆಬ್ರವರಿಯಲ್ಲಿ ಕೋವಿಡ್-19ಗೂ ಮತ್ತು 2013ರ ಯುನ್ನಾನ್ ಪ್ರಾಂತ್ಯದಲ್ಲಿ ಕಂಡು ಬಂದ ವೈರಸ್ ನ ಮಾದರಿಗೂ ಶೇಕಡಾ 96.2ರಷ್ಟು ಹೋಲಿಕೆಯಿದೆ ಎಂದಿದ್ದರು. ಆದರೆ ಈ ಬಗ್ಗೆ ವುಹಾನ್ ಲ್ಯಾಬ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








