2 ವಿಧದ 4 ಡೋಸ್ ಲಸಿಕೆ ಪಡೆದಿದ್ದ ಮಹಿಳೆಗೆ ಕೋವಿಡ್ ಪಾಸಿಟೀವ್ ಪತ್ತೆ…
ಇಂದೋರ್ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಎರಡು ಬೇರೆ ಬೇರೆ ಲಸಿಕೆಯ ನಾಲ್ಕು ಡೋಸ್‌ಗಳನ್ನು ತೆಗೆದುಕೊಂಡಿರುವ ಮಹಿಳೆಯೊಬ್ಬರಿಗೆ ಕೋವಿಡ್ -19 ಪಾಸಿಟೀವ್ ಪತ್ತೆಯಾಗಿದೆ, ತದನಂತರ ಅವರನ್ನ ದುಬೈಗೆ ಹೋಗುವ ವಿಮಾನವನ್ನು ಹತ್ತದಂತೆ ತಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
“ಇಂದೋರ್-ದುಬೈ ವಿಮಾನದಲ್ಲಿ ಕ್ಷಿಪ್ರ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಅದರ ಭಾಗವಾಗಿ ಇಂದು 89 ಪ್ರಯಾಣಿಕರನ್ನು ಪರೀಕ್ಷಿಸಲಾಯಿತು. ಅವರಲ್ಲಿ ಒಬ್ಬ ಮಹಿಳೆ ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ,” ಎಂದು ಇಂದೋರ್ ಆರೋಗ್ಯ ಇಲಾಖೆಯ ವೈದ್ಯಕೀಯ ಅಧಿಕಾರಿ ಡಾ.ಪ್ರಿಯಾಂಕಾ ಕೌರವ್ ಬುಧವಾರ ತಿಳಿಸಿದರು.
ಮಹಿಳೆಯು 12 ದಿನಗಳ ಹಿಂದೆ ಮಧ್ಯಪ್ರದೇಶದ ಮೊವ್ ಪಟ್ಟಣಕ್ಕೆ ಹತ್ತಿರದ ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗವಹಿಸಲು ಬಂದಿದ್ದಾಳೆ ಎಂದು ಕೌರವ್ ಹೇಳಿದ್ದಾರೆ. ಅವರು ಜನವರಿ ಮತ್ತು ಆಗಸ್ಟ್ ನಡುವೆ ಸಿನೋಫಾರ್ಮ್ ಮತ್ತು ಫಿಜರ್‌ನ ಕೋವಿಡ್ -19 ವಿರೋಧಿ ಲಸಿಕೆಗಳನ್ನು ತಲಾ ಎರಡು ಡೋಸ್ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಿಳೆ ಸದ್ಯಕ್ಕೆ ಲಕ್ಷಣ ರಹಿತಳಾಗಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ನಾಲ್ಕು ದಿನಗಳ ಹಿಂದೆ ತನಗೆ ಶೀತ ಮತ್ತು ಕೆಮ್ಮು ಇತ್ತು ಎಂದು ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ಮಹಿಳೆ ತಿಳಿಸಿದ್ದಾಳೆ.
ರಾಜ್ಯದ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ ನಿನ್ನೆ 48 ಕೋವಿಡ್ -19 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಇಲ್ಲಿಯವರೆಗೆ ಸಾವನ್ನಪ್ಪಿರುವವರ ಸಂಖ್ಯೆ 10,533.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮಧ್ಯಪ್ರದೇಶದಲ್ಲಿ ಕರೋನವೈರಸ್ನ ಒಮಿಕ್ರಾನ್ ರೂಪಾಂತರದ 9 ಪ್ರಕರಣಗಳು ವರದಿಯಾಗಿವೆ.








