ಮುಂಬೈ, ಮೇ 30 : ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಹಸ್ತ ಚಾಚಿರುವ ನಟ ಸೋನು ಸೂದ್ ಅವರ ಹೆಸರನ್ನು ಇಟ್ಟಿದ್ದಾಳೆ ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ನಿಂದಾಗಿ ಸಿಲುಕಿ ಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಎರಡು ವಾರಗಳ ಹಿಂದೆ ಸೋನು ಸೂದ್ ಗರ್ಭಿಣಿ ವಲಸಿಗ ಮಹಿಳೆಯೊಬ್ಬರಿಗೆ ಅವರ ಊರನ್ನು ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದು, ಆ ಮಹಿಳೆ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತನ್ನ ನವಜಾತ ಶಿಶುವಿಗೆ ಸೋನು ಸೂದ್ ಎಂದು ಆಕೆ ಹೆಸರನ್ನಿಟ್ಟಿದ್ದು, ಈ ಮೂಲಕ ನಟನಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದ್ದಾಳೆ.
ಸಂದರ್ಶನವೊಂದರಲ್ಲಿ ಸೋನು ಸೂದ್ ಈ ವಿಚಾರವನ್ನು ತಿಳಿಸಿದ್ದು, ಮಹಿಳೆಯ ಕುಟುಂಬ ನಟನಿಗೆ ಕರೆಮಾಡಿ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದೆ. ಮಗುವಿಗೆ ತನ್ನ ಹೆಸರಿಟ್ಟದ್ದನ್ನು ತಿಳಿದ ನಟ ಸೋನು ಸೂದ್ ಭಾವುಕರಾಗಿದ್ದಾರೆ. ನಾನು ಅವರು ಶ್ರೀವಾಸ್ತವ್ ವಾಗಿರುವ ಕಾರಣ ಸೂದ್ ಎನ್ನುವ ಹೆಸರನ್ನು ಹೇಗೆ ಇಡುತ್ತೀರಿ ಎಂದು ಕೇಳಿದೆ. ಅಲ್ಲದೆ ಸೋನು ಶ್ರೀವಾಸ್ತವ್ ಎಂದಿಡಲು ಸೂಚಿಸಿದೆ. ಆದರೆ ಅವರು ನಹಿ ಹಮ್ನಿ ಬಚ್ಚೆ ಕಾ ನಾಮ್ ಸೋನು ಸೂದ್ ಶ್ರೀವಾಸ್ತವ್ ರಾಖಾ ಹೈ ಎಂದು ಹೇಳಿದರು. ಇದು ನನ್ನ ಹೃದಯವನ್ನು ಬಹುವಾಗಿ ತಟ್ಟಿತು ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಸೋನು ಸೂದ್ ವಲಸೆ ಕಾರ್ಮಿಕರಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್ ನ ವ್ಯವಸ್ಥೆ ಮಾಡಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಸೋನು ಸೂದ್ ಇಲ್ಲಿಯವರೆಗೆ ಸುಮಾರು 2000 ವಲಸಿಗರನ್ನು ಅವರ ಊರಿಗೆ ಸುರಕ್ಷಿತವಾಗಿ ಕಳುಹಿಸಿ ಕೊಟ್ಟಿದ್ದರೆ, ಕೇರಳದಲ್ಲಿ ಸಿಲುಕಿದ್ದ 170 ಯುವತಿಯರನ್ನು ಅವರ ಮನೆಗಳಿಗೆ ವಿಮಾನದ ಮೂಲಕ ಕಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಸೋನು ಸೂದ್ ಅವರ ಕಾರ್ಯಕ್ಕೆ ದೇಶದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.








