ಹುಬ್ಬಳ್ಳಿ : ಅನಧಿಕೃತ ಕಟ್ಟಡದಿಂದ ಈ ಬಾಲಕನ ಕನಸು ಕಮರಿ ಹೋಗಿದೆ. ಈ ಬಾಲಕನ ಬದುಕಿಗೆ ಕೊಳ್ಳಿ ಇಟ್ಟ ಆ ಅನಧಿಕೃತ ಕಟ್ಟಡ ತೆರವಿಗೆ ಮಾತ್ರ ಹುಬ್ಬಳ್ಳಿ ಮಹಾನಗರ ಪಾಲಿಕೆ ಎರಡು ವರ್ಷಗಳಿಂದ ಮೀನಾಮೇಷ ಎಣಿಸುತ್ತಲ್ಲೇ ಇದೆ. ಪರಿಹಾರದ ಮಾತಂತೂ ಗಗನ ಕುಸುಮವೇ ಆಗಿದೆ.
ಊಟ ಸೇರಿದಂತೆ ನಿತ್ಯದ ಎಲ್ಲಾ ಕಾರ್ಯಗಳಿಗೂ ಪಾಲಕರನ್ನೇ ಅವಲಂಬನೆಯಾಗಿರುವ ಈ ಬಾಲಕನ ಹೆಸರು ಸಿದ್ದಾರ್ಥ ಮಂಜುನಾಥ ಬಳ್ಳಾರಿ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಬಾಲಕನ ಕುಟುಂಬ ವಾಸವಾಗಿದೆ. ಎಲ್ಲಾ ಮಕ್ಕಳಂತೆ ಈತನು ಸಹ ಆಟವಾಡಿಕೊಂಡು ಓದಿಕೊಂಡು ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ ಸಿದ್ದಾರ್ಥ ಈಗ ಒಂದು ಕೈ ಕಳೆದುಕೊಂಡು ಅಂಗವಿಕಲನಾಗಿ ಮನೆಯಲ್ಲಿ ಕುಳಿತಿದ್ದಾನೆ. ಈತ ಕಂಡ ಕನಸುಗಳು ಕಮರಿ ಹೋಗಿವೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಆ ಡೆಡ್ಲಿ ಕಟ್ಟಡ.
ಹುಬ್ಬಳ್ಳಿಯ ಚೇತನಾ ಕಾಲೋನಿಯಲ್ಲಿರುವ ಈ ಕಟ್ಟಡ ಬಾಲಕನ ಬದುಕಿಗೆ ಕೊಳ್ಳಿ ಇಟ್ಟಿದೆ. 2018 ಸೆಪ್ಟೆಂಬರ್ 25 ರಂದು ಸ್ನೇಹಿತರ ಜೊತೆ ಆಟವಾಡುತ್ತಿದ್ದ ಸಿದ್ದಾರ್ಥ ನೀರು ಕುಡಿಯಲು ಸ್ನೇಹಿತನ ಮನೆಗೆ ಹೋಗಿದ್ದಾನೆ. ಕಟ್ಟಡದ ಮೆಟ್ಟಿಲುಗಳ ಸಮೀಪ ಹಾದು ಹೋಗಿದ್ದ 9 ಕೆ.ವಿ ವಿದ್ಯುತ್ ಲೈನ್ನಿಂದ ಬಾಲಕ ಸಿದ್ದಾರ್ಥಗೆ ಕರೆಂಟ್ ಶಾಕ್ ಹೊಡೆದಿದೆ. ಬಾಲಕ ಕಣ್ಣು ಬಿಟ್ಟು ನೋಡಿದಾಗ ಎಡಗೈ ಇರಲಿಲ್ಲ. ಕೈಕಾಲು ದೇಹವೆಲ್ಲ ಸುಟ್ಟು ಕರಕಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕನಿಗೆ ಇದುವರೆಗೆ 20 ಕ್ಕು ಹೆಚ್ಚು ಆಪರೇಶನ್ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ.
ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡದಿಂದ ಬಾಲಕ ಸಿದ್ದಾರ್ಥನ ಬದುಕು ಸುಟ್ಟು ಹೋಗಿದೆ. ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡ ತೆರವಿಗೆ ಬಾಲಕ ಸಿದ್ದಾರ್ಥ್ ತಂದೆ ಹೋರಾಟ ನಡೆಸಿದ್ದಾರೆ. ಹೋರಾಟದ ಫಲವಾಗಿ ಮಹಾನಗರ ಪಾಲಿಕೆ ಸರ್ವೆ ನಡೆಸಿ ಕೈತೊಳೆದುಕೊಂಡಿದೆ. ಪಾಕಿರ್ಂಗ್ ಜಾಗ ಮತ್ತು ಸೆಟ್ ಬ್ಯಾಕ್ ಬಿಡದೆ ನಿರ್ಮಾಣ ಮಾಡಿದ ಪರಿಣಾಮ ವಿದ್ಯುತ್ ಲೈನ್ ಗೆ ಅಂಟಿಕೊಂಡೆ ಕಟ್ಟಡ ನಿರ್ಮಾಣವಾಗಿದೆ. ಹೆಚ್ಚುವರಿಯಾಗಿ ನಿರ್ಮಿಸಿದ ಕಟ್ಟಡದ ಭಾಗವನ್ನ ತೆರವಿಗೆ ಆದೇಶ ಮಾಡಿ ಹಲವಾರು ತಿಂಗಳು ಕಳೆದರು ಮಹಾನಗರ ಪಾಲಿಕೆ ಮಾತ್ರ ಇಲ್ಲಸಲ್ಲದ ಕಾರಣ ಹೇಳಿ ಜಾರಿಕೊಳ್ಳುತ್ತಿದೆ. ಕಟ್ಟಡದ ಮಾಲೀಕನಿಂದ ಪರಿಹಾರ ಕೊಡಿಸುವ ಯಾವುದೇ ಪ್ರಯತ್ನ ಕೂಡ ಪಾಲಿಕೆಯಿಂದ ನಡೆಯದೇ ಇರುವುದು ದುರ್ದೈವದ ಸಂಗತಿ.








