ಕಾರವಾರ: ಮುರುಡೇಶ್ವರ ಸಮುದ್ರದಲ್ಲಿ (Murudeshwar Beach) ಬೆಂಗಳೂರು ಮೂಲದ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರವಾಸಿಗರಿಗೆ (Tourists) ನಿರ್ಬಂಧ ಹೇರಲಾಗಿದೆ.
ಭಾನುವಾರ ಬೆಂಗಳೂರಿನ (Bengaluru) ವಿದ್ಯಾಸೌಧ ಪಿ.ಯು ಕಾಲೇಜಿನ ಗೌತಮ್ (17) ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಧನುಷ್ ಎಂಬ ಯುವಕನನ್ನು ರಕ್ಷಿಸಲಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಪ್ರವಾಸಿಗರ ಹುಚ್ಚಾಟಕ್ಕೆ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ.
ಕಡಲ ತೀರ ಭಾಗದಲ್ಲಿ ಏಕಾಏಕಿ ನಿರ್ಬಂಧ ವಿಧಿಸಿದ್ದರಿಂದ ಪ್ರವಾಸೋದ್ಯಮ ಚಟುವಟಿಕೆ ನಂಬಿದವರು ಸಂಕಷ್ಟಕ್ಕೆ ಈಡಾಗುವಂತಾಗಿದೆ. ಬಹುತೇಕ ವ್ಯಾಪಾರಸ್ಥರು ವಾರಾಂತ್ಯದಲ್ಲಿ ಆಗುವ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದಾರೆ. ಅವರಿಗೆ ತೊಂದರೆಯಾಗಿದೆ.
ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕಡಲ ತೀರದಲ್ಲಿ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಇದಕ್ಕೆ ಕೆಲ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಮುರುಡೇಶ್ವರದ ಸಮುದ್ರಕ್ಕೆ ತೆರಳಿದ್ದ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ಹೋಗಿದ್ದರು. ಈ ವೇಳೆ ಓರ್ವ ಯುವಕ ಸಾವನ್ನಪ್ಪಿದ್ದಾನೆ.