ಬಾಗಲಕೋಟೆ: ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಯುವಕ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬ ಆರೋಪವೊಂದು ಕೇಳಿ ಬಂದಿದೆ.
ಬೀಳಗಿ (Beelagi) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುಕ್ಕವ್ವ ವಡವಾಣಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಯುವತಿಯ ತಂದೆ ರುದ್ರಪ್ಪ, ನನ್ನ ಮಗಳ ಸಾವಿಗೆ ಪ್ರೀತಿಸಿ ಕೈಕೊಟ್ಟ ಶಂಕ್ರಪ್ಪ ಪತ್ತಾರ ಕಾರಣ ಎಂದು ಆರೋಪಿಸಿ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ್ದರಿಂದಾಗಿ ನನ್ನ ಮಗಳು ಸಾವನ್ನಪ್ಪಿದ್ದಾಳೆ. ಇದಕ್ಕೆ ಯುವಕನೇ ಕಾರಣ ಎಂದು ದೂರು ಸಲ್ಲಿಸಿದ್ದಾರೆ. ವಾಟ್ಸಪ್ ಮೆಸೇಜ್, ಫೋಟೋಗಳನ್ನ ಸಾಕ್ಷಿಯಾಗಿ ಇಟ್ಟುಕೊಂಡು ದೂರು ನೀಡಲು ಯುವತಿಯ ತಂದೆ ಮುಂದಾಗಿದ್ದಾರೆ.
ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.