5 ರಿಂದ 7 ವರ್ಷದೊಳಗಿನ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಈಗ ಕಡ್ಡಾಯವಾಗಿದೆ. 5 ವರ್ಷ ದಾಟಿದ ಮಕ್ಕಳು ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲೇಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರೊಂದಿಗೆ, ಪೋಷಕರು ತಮ್ಮ ಮಕ್ಕಳ ಬಯೋಮೆಟ್ರಿಕ್ ಡೇಟಾವನ್ನು ಉಚಿತವಾಗಿ ಅಪ್ಡೇಟ್ ಮಾಡಿಸಬಹುದಾದ ಅವಕಾಶವನ್ನೂ ಕೇಂದ್ರ ನೀಡಿದೆ.
ಆದರೆ ಈ ಉಚಿತ ಅವಕಾಶಕ್ಕೆ ವಯಸ್ಸಿನ ಮಿತಿ ಇರುತ್ತದೆ. 5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಅವಕಾಶ ಲಭ್ಯವಿದೆ. 7 ವರ್ಷ ದಾಟಿದ ಮೇಲೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಬೇಕಾದರೆ, ಪ್ರತಿ ಅಪ್ಡೇಟ್ಗೆ ₹100 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಮಕ್ಕಳಿಗೆ ಆಧಾರ್ ಕಾರ್ಡ್ ನೀಡುವಾಗ 5 ವರ್ಷದೊಳಗಿನ ಮಕ್ಕಳಿಂದ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಅವರು 5 ವರ್ಷ ದಾಟಿದ ಬಳಿಕ ಬೆರಳಚ್ಚು, ದೃಷ್ಟಿಚಿಹ್ನೆ (ಐರಿಸ್) ಸೇರಿದಂತೆ ಎಲ್ಲಾ ಬಯೋಮೆಟ್ರಿಕ್ ಮಾಹಿತಿಗಳನ್ನು ಅಪ್ಡೇಟ್ ಮಾಡಿಸಬೇಕು. ಇದು ಆಧಾರ್ನಲ್ಲಿ ನಿಖರವಾದ ವಿವರಗಳನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಯುಐಡಿಎಐ ಎಲ್ಲ ಪೋಷಕರಿಗೂ ತಮ್ಮ ಮಕ್ಕಳ ಆಧಾರ್ ಬಯೋಮೆಟ್ರಿಕ್ ಡೇಟಾ ತಕ್ಷಣವೇ ಅಪ್ಡೇಟ್ ಮಾಡಿಸಲು ಕರೆ ನೀಡಿದ್ದು, ಇದನ್ನು ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗಳಲ್ಲಿ ಉಚಿತವಾಗಿ ಮಾಡಿಸಬಹುದು ಎಂದು ತಿಳಿಸಿದೆ.








