ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ – ಸುಪ್ರೀಂ ಗೆ ಕೇಂದ್ರದ ಮಾಹಿತಿ..
ಕೋವಿಡ್ -19 ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಾವಣಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠಕ್ಕೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಒಂಬತ್ತು ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನ ಲಸಿಕೆಗೆ ಹಾಜರುಪಡಿಸಬಹುದು ಎಂದು ತಿಳಿಸಿದೆ.
ಕೋವಿನ್ ಪೋರ್ಟಲ್‌ನಲ್ಲಿ ಕೋವಿಡ್ -19 ಲಸಿಕೆಯನ್ನು ನೀಡಲು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಒತ್ತಾಯಿಸಲಾಗುತ್ತಿದೆ ಎಂದು ಸಿದ್ಧಾರ್ಥಶಂಕರ್ ಶರ್ಮಾ ಎಂಬುವವರು ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತ್ತು. ಸುಪ್ರೀಂ ಕೋರ್ಟ್ ಅಕ್ಟೋಬರ್ 1, 2021 ರಂದು PIL ಮೇಲೆ ಕೇಂದ್ರಕ್ಕೆ ನೋಟಿಸ್ ನೀಡಿತ್ತು.
“ಅಕ್ಟೋಬರ್ 1, 2021 ರ ಈ ನ್ಯಾಯಾಲಯದ ಆದೇಶದ ಪ್ರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ದಾಖಲಿಸುವ ಅಫಿಡವಿಟ್ ಅನ್ನು ಸಲ್ಲಿಸಿದೆ.
ಜೈಲು ಕೈದಿಗಳು, ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿನ ಕೈದಿಗಳು ಮುಂತಾದ ಗುರುತಿನ ಚೀಟಿಗಳನ್ನು ಹೊಂದಿರದ ಇತರ ವರ್ಗದ ವ್ಯಕ್ತಿಗಳಿಗೆ ನಿಬಂಧನೆಯನ್ನು ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ದಾಖಲಿಸಲಾಗಿದೆ, ”ಎಂದು ಸುಪ್ರೀಂ ಪೀಠ ಹೇಳಿದೆ.