ದೇಶದ ಮಾನ ಹರಾಜು ಹಾಕಿದ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ: ಆಮ್ ಆದ್ಮಿ ಪಕ್ಷ
ಕೋರೋನಾ ನಂತರ ಚೈನಾ ಬಿಟ್ಟು ಭಾರತದ ಕಡೆ ಮುಖಮಾಡುತ್ತಿದ್ದ ವಿಶ್ವದ ಪ್ರತಿಷ್ಠಿತ ಕಂಪೆನಿಗಳು ವಿಸ್ಟ್ರಾನ್ ಹಾಗೂ ಟೊಯೋಟಾ ಕಂಪೆನಿಗಳ ಬಿಕ್ಕಟ್ಟು ವಿಚಾರದಲ್ಲಿ ಕರ್ನಾಟಕ ಸರ್ಕಾರ ನಡೆದುಕೊಂಡ ಬೇಜವಾಬ್ದಾರಿ ನೀತಿಯಿಂದ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಇದರಿಂದ ದೇಶದ, ಕರ್ನಾಟಕದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ. ಈ ವೈಫಲ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಹೊರಬೇಕು, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರ್ ಅಂತಹ ನಾಲಾಯಕ್ ಮಂತ್ರಿಗಳನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.
ಗುರುವಾರ ನಡೆದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ನಂತರ ಆಗಬಹುದಾಗಿದ್ದ ಔದ್ಯೋಗಿಕ ಕ್ರಾಂತಿಗೆ ಕರ್ನಾಟಕದಲ್ಲಿ ನಡೆದ ಘಟನೆಗಳಿಂದ ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಬೊಗಳೆ ಬಿಟ್ಟ ಮುಖ್ಯಮಂತ್ರಿಗಳೇ ಮೊದಲು ಟೊಯೋಟಾ ಹಾಗೂ ವಿಸ್ಟ್ರಾನ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಭವಿಷ್ಯ ಕಾಪಾಡಿ ಎಂದು ಹೇಳಿದರು.
ಅಸಮರ್ಥ ಕೈಗಾರಿಕಾ, ಕಾರ್ಮಿಕ ಸಚಿವರಿಂದ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಿರೀಕ್ಷಿಸುವುದು ಅಸಾಧ್ಯ. ವಿಸ್ಟ್ರಾನ್ ಘಟನೆಯಿಂದ ಚೈನಾ ಜನತೆ ನಮ್ಮ ದೇಶವನ್ನು ಆಡಿಕೊಳ್ಳುವಂತಾಗಿದೆ, ಈ ಕಳಂಕಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಅಲ್ಲದೇ ಸರ್ಕಾರದಿಂದ ಹೂಡಿಕೆದಾರರಿಗೆ ಸರಿಯಾದ ಮಾರ್ಗಸೂಚಿಯೇ ಇಲ್ಲದಂತಾಗಿದೆ. ಎಬಿಸಿ ಸ್ಕೀಮ್ (ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್) ಎನ್ನುವ ಕಣ್ಣೊರೆಸುವ ಯೋಜನೆ ತಂದು ಉದ್ಯೋಗದಾತರಿಗೂ ವಂಚಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರ ಉಪಾಧ್ಯಕ್ಷರಾದ ಕೆ.ಬಿ.ನಾಗಣ್ಣ ಮಾತನಾಡಿ, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಕಾರ್ಮಿಕರ ಬಿಕ್ಕಟ್ಟುಗಳಿಗೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಇದನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ ಎಂದು ಹೇಳುವಷ್ಟು ಮತಿಹೀನರಾಗಿದ್ದಾರೆ. ಇಂತಹ ಮಂತ್ರಿಯನ್ನು ಪಡೆದ ನಾವೇ ಧನ್ಯರು ಎಂದು ವ್ಯಂಗ್ಯವಾಡಿದರು.
ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರೇ, ಬೆಳಗಾವಿ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗುವ ಕನಸನ್ನು ಬಿಡಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರರೇ ಎಲ್ಲಿ ಕಾಣೆಯಾಗಿದ್ದೀರಿ ಇಲ್ಲಿ 20 ಸಾವಿರ ನೌಕರರ ಹಾಗೂ ಅವರ ಕುಟುಂಬ ವರ್ಗದವರು ಅಭದ್ರತೆಯಲ್ಲಿ ದಿನದೂಡುತ್ತಿದ್ದಾರೆ ಚಳಿಯಲ್ಲಿ ಬೆಚ್ಚಗೆ ಮಲಗಿದ್ದರೆ ಎದ್ದು ಬನ್ನಿ ಎಂದು ಕಿಡಿಕಾರಿದರು.
ವಿಸ್ಟ್ರಾನ್ ಕಂಪೆನಿ ದ್ವಂಸ ಪ್ರಕರಣದಲ್ಲಿ ಹೊರಗಿನವರ ಕೈವಾಡವಿದೆ, ಕೈಗಾರಿಕೆಗಳಿಗೆ ಭದ್ರತೆ ಒದಗಿಸುವಲ್ಲಿ ಗೃಹ ಇಲಾಖೆಯೂ ಸಹ ವಿಫಲಾಗಿದೆ ಅಲ್ಲದೇ ಕಾರ್ಮಿಕ ನಾಯಕರನ್ನು ಸುಖಾ ಸುಮ್ಮನೆ ಬಂಧಿಸುತ್ತಿರುವುದನ್ನು ಆಮ್ ಆದ್ಮಿ ಪಕ್ಷ ಸಹಿಸುವುದಿಲ್ಲ. ಈ ವೈಫಲ್ಯದ ಹೊಣೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೊರಬೇಕು ಎಂದರು.
ನಮ್ಮ ಕರ್ನಾಟಕದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ ರಾಜ್ಯ ಬಿಜೆಪಿ ಸರ್ಕಾರವನ್ನು ಈ ರಾಜ್ಯದ ಜನ ಕ್ಷಮಿಸುವುದಿಲ್ಲ, ಕಾರ್ಮಿಕರ ಕಣ್ಣೀರು ನಿಮ್ಮನ್ನು ಉಳಿಸದೇ ಬಿಡುವುದಿಲ್ಲ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









