ವಿರಾಟ್ ಕೊಹ್ಲಿಯವರನ್ನು ಜಾವೇದ್ ಮಿಯಾಂದಾದ್ಗೆ ಹೋಲಿಕೆ ಮಾಡಿದ ಅಮೀರ್ ಸೊಹೈಲ್
ವಿರಾಟ್ ಕೊಹ್ಲಿ… ಚೇಸಿಂಗ್ ಗಾಡ್ ಅಂತನೇ ಫೇಮಸ್. ಈಗಾಗಲೇ ವಿಶ್ವ ಕ್ರಿಕೆಟ್ ನಲ್ಲಿ ತನ್ನ ವಿಶ್ವ ರೂಪವನ್ನು ತೋರಿಸುತ್ತಿರುವ ಕೊಹ್ಲಿ ವಿಶ್ವದ ಕ್ರಿಕೆಟ್ ದಂತಕತೆಗಳ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ. ಈಗಾಗಲೇ ವಿರಾಟ್ ಕೊಹ್ಲಿ ಇನ್ನೊಬ್ಬ ಸಚಿನ್ ತೆಂಡುಲ್ಕರ್ ಅಂತನೇ ಕರೆಯಲಾಗುತ್ತಿದೆ. ವಿಶ್ವಕ್ರಿಕೆಟ್ನಲ್ಲಿ ಮಾಡಿರುವ ಮಾಡುತ್ತಿರುವ ದಾಖಲೆಗಳನ್ನು ನೋಡಿದಾಗ ಅಚ್ಚರಿಯೂ ಆಗುತ್ತದೆ. ಹಾಗೇ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಅಳಿಸಿ ಹಾಕುತ್ತಾರೆ ಅನ್ನೋ ನಂಬಿಕೆಯೂ ಇದೆ.
ಈಗಾಗಲೇ ಹಲವಾರು ಕ್ರಿಕೆಟ್ ಪಂಡಿತರು ವಿರಾಟ್ ಆಟವನ್ನು ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಹೋಲಿಕೆ ಮಾಡಿದ್ದಾರೆ. ಇಯಾನ್ ಚಾಪೆಲ್ ವಿವಿ ರಿಚಡ್ರ್ಸ್ ಜೊತೆ ಹೋಲಿಕೆ ಮಾಡಿದ್ದರು. ಪ್ರಸ್ತುತ ಕ್ರಿಕೆಟ್ ನಲ್ಲಿ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ನಡುವೆಯೂ ಹೋಲಿಕೆ ಮಾಡಲಾಗುತ್ತಿದೆ. ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಅಮೀರ್ ಸೋಹೈಲ್ ಅವರು ಕೊಹ್ಲಿಯ ಶ್ರೇಷ್ಠತೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಸೊಹೈಲ್ ಅವರು ಪಾಕಿಸ್ತಾನದ ಶ್ರೇಷ್ಠ ಆಟಗಾರ ಜಾವೇದ್
ಮಿಯಾಂದಾದ್ ಜೊತೆ ಹೋಲಿಕೆ ಮಾಡಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಅಮೀರ್ ಸೊಹೈಲ್ ಪಾಕಿಸ್ತಾನದ ಜಬರುದಸ್ತು ಆರಂಭಿಕ ಆಟಗಾರ. ಹಾಗೇ ಸುಮ್ಮನೆ ಜಾವೇದ್ ಜೊತೆ ಕೊಹ್ಲಿಯವರನ್ನು ಹೋಲಿಕೆ ಮಾಡಿಲ್ಲ. ಅದಕ್ಕೆ ಸರಿಯಾದ ಕಾರಣ ಕೊಟ್ಟು ವಿವರಿಸಿದ್ದಾರೆ. ಕೆಲವು ಶ್ರೇಷ್ಠ ಆಟಗಾರರು ವೈಯಕ್ತಿಕವಾಗಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಹಾಗಾಗಿ ಅವರು ವೈಯಕ್ತಿಕವಾಗಿ ಶ್ರೇಷ್ಠರಾಗಿ ಹೊರಹೊಮ್ಮುತ್ತಾರೆ. ಆದ್ರೆ ಅವರ ಶ್ರೇಷ್ಠತೆ ಒಟ್ಟಾರೆ ತಂಡದ ಮೇಲೆ ಗಾಢವಾದ ಪರಿಣಾಮ ಬೀರುವುದಿಲ್ಲ. ನೀವು ಪಾಕಿಸ್ತಾನದ ಕ್ರಿಕೆಟ್ ಇತಿಹಾಸ ಮತ್ತು ಶ್ರೇಷ್ಠತೆಯನ್ನು ಗಮನಿಸಿದಾಗ ಅಲ್ಲಿ ಕೇಳಿ ಬರುವ ಮೊದಲ ಹೆಸರು ಜಾವೇದ್ ಮಿಯಾಂದಾದ್.
ಅವರ ಶ್ರೇಷ್ಠತೆಯನ್ನು ಇಂದಿಗೂ ನೆನಪು ಮಾಡಿಕೊಳ್ಳಲಾಗುತ್ತದೆ. ಯಾಕಂದ್ರೆ ಅವರು ತಂಡದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತಿದ್ದರು. ಅವರೊಂದಿಗೆ ಜೊತೆಯಾಟವನ್ನು ಆಡಿದಾಗ ಅವರಿಂದ ಸಾಕಷ್ಟು ಕಲಿತುಕೊಳ್ಳಬಹುದು. ಅಲ್ಲದೆ ಆಟವನ್ನು ಸುಧಾರಣೆ ಮಾಡಿಕೊಳ್ಳಲು ಪ್ರೇರಣೆಯೂ ಆಗುತ್ತದೆ. ಇದೇ ರೀತಿ ಕೊಹ್ಲಿ ಕೂಡ ಮಾಡುತ್ತಿದ್ದಾರೆ. ಕೊಹ್ಲಿಯ ಆಟವನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ತಂಡದ ಇತರೇ ಆಟಗಾರರ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಾರೆ. ಹೀಗಾಗಿ ಕೊಹ್ಲಿ ಶ್ರೇಷ್ಠ ಆಟಗಾರನಾಗಿದ್ದಾರೆ ಅಂತ ಅಮೀರ್ ಸೊಹೈಲ್ ಹೇಳ್ತಾರೆ.
ಜಾವೇದ್ ಮಿಯಾಂದಾದ್ ಅಂದಾಗ ತಕ್ಷಣ ನೆನಪಾಗುವುದು ಅವರ ಆಕ್ರಮಣಕಾರಿ ಆಟ. ಜೊತೆಗೆ ಮೈದಾನದಲ್ಲಿ ಅವರ ಹಾವಭಾವ. ಅದ್ರಲ್ಲೂ ಕಿರಣ್ ಮೊರೆ ಜೊತೆಗಿನ ಕಪಿಚೇಷ್ಠೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಗೆಲುವಿಗಾಗಿ ಜಿದ್ದಾಜಿದ್ದಿನಿಂದ ಆಡುತ್ತಿದ್ದ ಮಿಯಾಂದಾದ್ಗೆ ಪಾಕ್ ಕ್ರಿಕೆಟ್ ನಲ್ಲಿ ವಿಶೇಷ ಗೌರವವಿದೆ. 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಿಯಾಂದಾದ್ 8832 ರನ್ ಹಾಗೂ 233 ಏಕದಿನ ಪಂದ್ಯಗಳಲ್ಲಿ 7381 ರನ್ ದಾಖಲಿಸಿದ್ದಾರೆ. ಪಾಕ್ ಪರ ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ಆಡಿದ್ದಾರೆ.
ಇನ್ನು ಕೊಹ್ಲಿ ಸದ್ಯ 70 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಸುಮಾರು 21ಸಾವರ ರನ್ ಪೇರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 7240 ರನ್, ಏಕದಿನ ಕ್ರಿಕೆಟ್ ನಲ್ಲಿ 11,867 ರನ್ ಹಾಗೂ ಟಿ-ಟ್ವೆಂಟಿಯಲ್ಲಿ 2021 ರನ್ ಪೇರಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಯಾಕೆ ಶ್ರೇಷ್ಠ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ ಎಂಬುದಕ್ಕೆ ಸೊಹೈಲ್ ಹೇಳುವುದು ಹೀಗೆ. ಕೊಹ್ಲಿಗೆ ಅಬ್ಬರದ ಬ್ಯಾಟಿಂಗ್ ಮಾಡಲು ಗೊತ್ತು. ಹಾಗೇ ಆಕ್ರಮಣಕಾರಿ ಪ್ರವೃತ್ತಿಯೂ ಅವರಲ್ಲಿದೆ. ಅದು ಅಲ್ಲದೆ ಅವರಿಗೆ ವೃತ್ತಿಪರ ಬದುಕು ಮತ್ತು ವೈಯಕ್ತಿಕ ಬದುಕು ಹೇಗೆ ಎಂಬುದನ್ನು ಅರಿತುಕೊಂಡಿದ್ದಾರೆ ಅಂತ ಸೊಹೈಲ್ ಹೇಳ್ತಾರೆ.








