ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್, ತಮ್ಮ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯ ಚಿಗುರು ಕಂಡಿದ್ದಾರೆ. ಮಾರ್ಚ್ 13 ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಅವರು ತಮ್ಮ ಹೊಸ ಪ್ರೇಯಸಿ ಗೌರಿ ಅವರನ್ನು ಪರಿಚಯಿಸಿದರು. ಗೌರಿ, ಬೆಂಗಳೂರಿನ ನಿವಾಸಿಯಾಗಿದ್ದು, ಆಮಿರ್ ಖಾನ್ ಅವರೊಂದಿಗೆ ಕಳೆದ ಒಂದೂವರೆ ವರ್ಷಗಳಿಂದ ರಿಲೇಷನ್ಶಿಪ್ ನಲ್ಲಿ ಇದ್ದಾರೆ.
25 ವರ್ಷಗಳ ಹಿಂದಿನ ಪರಿಚಯದಿಂದ ಪ್ರಣಯದ ಹಾದಿಗೆ
ಆಮಿರ್ ಖಾನ್ ಮತ್ತು ಗೌರಿ ಅವರ ಪರಿಚಯವು 25 ವರ್ಷಗಳ ಹಿಂದಿನದು. ಆದರೆ, ಮಧ್ಯದಲ್ಲಿ ಕೆಲವು ವರ್ಷ ಸಂಪರ್ಕ ಕಡಿತವಾಗಿತ್ತು. ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ ನಂತರ, ಆಮಿರ್ ಮತ್ತು ಗೌರಿ ಅವರ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಪ್ರೀತಿಯ ರೂಪ ಪಡೆದುಕೊಂಡಿದೆ.
ಗೌರಿ ಅವರ ಹಿನ್ನೆಲೆ ಮತ್ತು ಕುಟುಂಬದ ಬೆಂಬಲ
ಗೌರಿ ಅವರಿಗೆ 6 ವರ್ಷದ ಮಗನಿದ್ದಾನೆ. ಆಮಿರ್ ಖಾನ್ ಅವರ ಕುಟುಂಬದವರು ಗೌರಿಯನ್ನು ಭೇಟಿಯಾಗಿ, ಅವರ ಸಂಬಂಧವನ್ನು ಸ್ವೀಕರಿಸಿದ್ದಾರೆ. ಈ ಸಂಬಂಧವು ಕುಟುಂಬದವರಿಗೆ ಸಂತೋಷ ತಂದಿದೆ ಎಂದು ಆಮಿರ್ ಖಾನ್ ತಿಳಿಸಿದ್ದಾರೆ. ಗೌರಿ, ಸಿನಿಮಾ ನಿರ್ಮಾಣದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಮಿರ್ ಖಾನ್ ಅವರ ಅಭಿಪ್ರಾಯ
ಆಮಿರ್ ಖಾನ್ ತಮ್ಮ ಹೊಸ ಸಂಬಂಧದ ಬಗ್ಗೆ ಮಾತನಾಡುತ್ತಾ, “ನಾನು ಮತ್ತು ಗೌರಿ 25 ವರ್ಷಗಳ ಹಿಂದೆ ಪರಿಚಿತರಾಗಿದ್ದೆವು. ಈಗ ನಾವು ಬಾಳ ಸಂಗಾತಿಗಳು. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಿದ್ದೇವೆ. ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸ ಮಾಡುತ್ತಿದ್ದೇವೆ, ಎಂದು ತಿಳಿಸಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಮದುವೆ ಬಗ್ಗೆ ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಅವರ ಮಕ್ಕಳಿಗೆ ಈ ಸಂಬಂಧ ಖುಷಿ ತಂದಿದ್ದು, ತಮ್ಮ ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕೆ ಅವರು ತಮ್ಮನ್ನು ಅದೃಷ್ಟವಂತನೆಂದು ಭಾವಿಸುತ್ತಾರೆ ಅಂತ ಹೇಳಿದ್ದಾರೆ.
ಬಾಲಿವುಡ್ ತಾರೆಯರ ಭೇಟಿ
ಮಾರ್ಚ್ 12 ರಂದು, ಆಮಿರ್ ಖಾನ್ ಅವರ ನಿವಾಸಕ್ಕೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ, ಆಮಿರ್ ಖಾನ್ ತಮ್ಮ ಪ್ರೇಯಸಿ ಗೌರಿಯನ್ನು ಅವರಿಗೆ ಪರಿಚಯಿಸಿದರು.