ತುಮಕೂರಿನಲ್ಲಿ ಲಾರಿ ಮತ್ತು ಇನ್ನೋವಾ ಅಫಘಾತ – ನವ ವಿವಾಹಿತ ಸಾವು
ಲಾರಿ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ ನಡೆದಿದ್ದು, ಅಪಘಾತದಲ್ಲಿ ನವವಿವಾಹಿತ ಹಾಗೂ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಚಿಕ್ಕ ಶೆಟ್ಟಿಕೆರೆ ಬಳಿ ನಡೆದಿದೆ.
ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರುತಿಸಲಾಗಿದೆ.
ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ಮದುವೆಯಾಗಿತ್ತು. ಮನೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಕಮಲಾಪುರಕ್ಕೆ ಕಾರಿನಲ್ಲಿ ಆಗಮಿಸಿದ್ದರು. ನಸುಕಿನ ಜಾವ ಮಾಯಸಂದ್ರ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು.
ಚಿಕ್ಕ ಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಆಶ್ಚರ್ಯಕರ ರೀತಿಯಲ್ಲಿ ನವ ವಧು ಮಂದಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.








