ಬೆಂಗಳೂರು : ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ದೂರನ್ನ ಸಲ್ಲಿಸಲಾಗುವುದು ಎಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಹೆಚ್.ಕೆ. ಪಾಟೀಲ್, ಇದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪವಲ್ಲ. ಈ ಸಮಿತಿಯಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಮೇಲ್ನೋಟಕ್ಕೆ ಕೆಲ ಕಡೆ ಅಕ್ರಮ ಕಾಣಿಸುತ್ತಿದೆ ಎಂದು ಅಭಿಪ್ರಾಯಕ್ಕೆ ಸಮಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಲೆಕ್ಕ ಪತ್ರ ಸಮಿತಿ ಪರಿಶೀಲಸನೆ ಮಾಡಬೇಕು. ಈ ರೀತಿ ಕೆಲಸಕ್ಕೆ ಅಡ್ಡಿ ಪಡಿಸಿದ್ದು ಎಂದೂ ಇಲ್ಲ ಎಂದು ಪಾಟೀಲ್ ತಿಳಿಸಿದರು.
ಅಧಿಕಾರಿಗಳು ನಮಗೆ ವರದಿ ಸಲ್ಲಿಸಿಲ್ಲ. ಇದನ್ನು ಸಮಿತಿ ತಪಾಸಣೆ ಮಾಡಬೇಕು. ಕೂಡಲೇ ವರದಿಯನ್ನು ಕಳಿಸಿ ಎಂದು ಅಧಿಕಾರಿಗಳಿಗೆ ಸಚಿವ ಶ್ರೀರಾಮುಲು ಹೇಳಬೇಕು ಎಂದು ಹೆಚ್.ಕೆ. ಪಾಟೀಲ್ ಆಗ್ರಹಿಸಿದರು. ಅಲ್ಲದೆ ಸರ್ಕಾರ ಅರ್ಧ ಲೀಟರ್ ಸ್ಯಾನಿಟೈಸರ್ ಗೆ 97 ರೂಪಾಯಿಯಂತೆ ಆರ್ಡರ್ ಮಾಡಿದೆ. ಸರ್ಕಾರ ಹೇಳಿದಷ್ಟು ಪ್ರಮಾಣ ಇವರು ಸಪ್ಲೈ ಮಾಡಿಲ್ಲ. ಜೊತೆಗೆ ಸರ್ಕಾರ ಕರೆದ ಮತ್ತೊಂದು ಟೆಂಡರ್ ನಲ್ಲಿ, ಅದೇ ಅರ್ಧ ಲೀಟರ್ ಗೆ 250 ರೂಪಾಯಿಗೆ ಖರೀದಿಗ ಮಾಡಲು ಸರ್ಕಾರ ಒಪ್ಪಿದೆ. ಹಾಗಾಗಿ ಲೆಕ್ಕ ಪತ್ರ ಸಮಿತಿಗೆ ಪರಿಶೀಲನೆ ನಡೆಸಲು ಅಡ್ಡಿ ಮಾಡಬಾರದು ಎಂದು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.








