ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಪಾಲಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಜನ ಆರೋಪಿಗಳು ಜೈಲು ಪಾಲಾಗಿದ್ದರು. ಈಗ 11 ಜನ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ಇನ್ನೂ ಐವರಿಗೆ ಜಾಮೀನು ಸಿಕ್ಕಿಲ್ಲ. ಅವರು ಜಾಮೀನು ಅರ್ಜಿ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಕುಟುಂಬಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ ಮೂಲದ, ಎ5 ಆರೋಪಿ ನಂದೀಶ್ ಜಾಮೀನು ಅರ್ಜಿ ಸಲ್ಲಿಸದಿರುವುದಕ್ಕೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಗನಿಗೆ ಜಾಮೀನು ಸಿಗದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಂದೀಶ್ ತಾಯಿ ಭಾಗ್ಯಮ್ಮ, ದರ್ಶನ್ ಆಚೆ ಬರುತ್ತಿದ್ದಾರೆ. ಅವರೇ ನೋಡಿಕೊಳ್ಳುತ್ತಾರೆ. ನಮಗೆ ದರ್ಶನ್ ಮೇಲೆ ಈಗಲೂ ನಂಬಿಕೆ ಇದೆ. ವಕೀಲರನ್ನು ನೇಮಿಸಿ ಜಾಮೀನು ಕೊಡಿಸುವ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಜಾಮೀನು ವಿಚಾರದಲ್ಲಿ ಏನು ಆಗಿದೆಯೋ ನಮಗೆ ಗೊತ್ತಿಲ್ಲ. ನನ್ನ ಮಗನನ್ನು ನೋಡಲು ಒಂದು ತಿಂಗಳ ಹಿಂದೆ ಹೋಗಿದ್ದೆವು. ಮಗನೂ ಸಹ ಬೇಲ್ ಬಗ್ಗೆ ಮಾತನಾಡಿಲ್ಲ. ನಟ ದರ್ಶನ್ ಬೇಲ್ ಕೊಡಿಸುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಈ ಕುಟುಂಬಸ್ಥರಿಗೆ ಸಹಾಯ ಮಾಡುವರೇ ಎಂಬುವುದನ್ನು ಕಾಯ್ದು ನೋಡಬೇಕಿದೆ.