ಅಪ್ಪು ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್ Saaksha Tv
ಬೆಂಗಳೂರು: ಕರ್ನಾಟಕ ರತ್ನ ಪುನೀತ ರಾಜಕುಮಾರ ದೇಶ-ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೇ ಇವರ ಸ್ನೇಹಿತರ ಬಳಗವು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ಇದ್ದು, ಇಂದು ಅವರ ನಿವಾಸಕ್ಕೆ ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ ಭೇಟಿ ನೀಡಲಿದ್ದಾರೆ.
ಪುನೀತ್ ನಿಧನದ ಬಳಿಕ ಅಕ್ಕಪಕ್ಕದ ರಾಜ್ಯಗಳ ಅನೇಕ ಸೆಲೆಬ್ರಿಟಿಗಳು ಬಂದು ಡಾ. ರಾಜ್ಕುಮಾರ್ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದರು. ಇಂದು ನಟ ಅಲ್ಲು ಅರ್ಜುನ್ ಅವರು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಪ್ಪು ನಿಧನದಿಂದ ದುಖಃದಲ್ಲಿರುವ ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಲಿದ್ದಾರೆ. ತಾವು ಪುನೀತ್ ಮನೆಗೆ ಭೇಟಿ ನೀಡುವುದಾಗಿ ಈ ಮೊದಲೇ ಅವರು ತಿಳಿಸಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ.
ಪುನೀತ್ ನಿಧನರಾದ ಸಂದರ್ಭದಲ್ಲಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಹೈದರಾಬಾದ್ನಲ್ಲಿ ನಡೆದ ಸಿನಿಮಾವೊಂದರ ಪ್ರಚಾರ ಕಾರ್ಯದ ವೇಳೆ ಮೌನಾಚರಣೆ ಮಾಡುವ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದರು. ಈಗ ಅವರು ಬೆಂಗಳೂರಿಗೆ ಬಂದು ಪುನೀತ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.
ಅಲ್ಲು ಅರ್ಜುನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್ನಿಂದ ಹೊರಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಎಚ್ಎಎಲ್ ತಲುಪಲಿದ್ದಾರೆ. ಬಳಿಕ ಅವರು ನೇರವಾಗಿ ಪುನೀತ್ ನಿವಾಸಕ್ಕೆ ಬರಲಿದ್ದಾರೆ. ಅಲ್ಲಿ ಅವರನ್ನು ಶಿವರಾಜ್ಕುಮಾರ್ ಬರಮಾಡಿಕೊಳ್ಳಲಿದ್ದಾರೆ. ನಂತರ ಅಪ್ಪು ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಲಿದ್ದಾರೆ.








