ಕನ್ನಡ ಚಲನಚಿತ್ರರಂಗದ ನಾಯಕ ನಟ ದರ್ಶನ್ಗೆ ಮತ್ತೊಮ್ಮೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದರ್ಶನ್ ಜೈಲು ಸೇರಿದ್ದು, ಆ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ಅವರು ಮಧ್ಯಂತರ ಜಾಮೀನು ಪಡೆದು ಹೊರಬಂದು, ತಕ್ಷಣವೇ ಬೆಂಗಳೂರಿನ BGS ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಶಸ್ತ್ರಚಿಕಿತ್ಸೆ ಅನಿವಾರ್ಯ
ಆರಂಭಿಕ ಹಂತದಲ್ಲಿ ಫಿಸಿಯೋಥೆರಪಿ ಮೂಲಕ ದರ್ಶನ್ ಅವರ ಬೆನ್ನು ನೋವನ್ನು ಹತೋಟಿಗೆ ತರಲು ಪ್ರಯತ್ನಿಸಲಾಯಿತಾದರೂ, ಇದರಿಂದ ಸೂಕ್ತ ಪರಿಹಾರವಾಗಿಲ್ಲ. ವೈದ್ಯರು ಶಸ್ತ್ರಚಿಕಿತ್ಸೆ ನಿರ್ದೇಶಿಸಿದ್ದು, ಈ ಶಸ್ತ್ರಚಿಕಿತ್ಸೆ ಸಂಕ್ರಾಂತಿ ಹೊತ್ತಿಗೆ ನಡೆಯುವ ಸಾಧ್ಯತೆಯಿದೆ.
ಈ ಸಮಯದಲ್ಲಿ ದರ್ಶನ್ ಅವರ ‘ಡೆವಿಲ್’ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಚೇತರಿಕೆ ನಂತರ ಅವರು ಪುನಃ ಚಿತ್ರೀಕರಣದಲ್ಲಿ ತೊಡಗುವ ಸಾಧ್ಯತೆ ಇದೆ. ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಆತಂಕದಲ್ಲಿದ್ದು, ಶೀಘ್ರ ಗುಣಮುಖರಾಗಿ ಬರುವಂತೆ ಹಾರೈಸುತ್ತಿದ್ದಾರೆ.