ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ಮಹತ್ವದ ಹಾಗೂ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಎಚ್ 57ನೇ ನ್ಯಾಯಾಲಯವು ಸಾಕ್ಷಿಗಳ ವಿಚಾರಣೆಗೆ ಅಧಿಕೃತವಾಗಿ ದಿನಾಂಕವನ್ನು ನಿಗದಿಪಡಿಸಿದ್ದು, ಹತ್ಯೆ ಪ್ರಕರಣದ ಕಾನೂನು ಹೋರಾಟ ಬಿರುಸುಗೊಂಡಿದೆ. ಮಂಗಳವಾರ (ಡಿಸೆಂಬರ್ 3) ನಡೆದ ವಿಚಾರಣೆ ವೇಳೆ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಈ ವೇಳೆ ದರ್ಶನ್ ಅವರ ಮೌನ ಎದ್ದು ಕಾಣುತ್ತಿತ್ತು.
ಸಾಕ್ಷಿಗಳ ವಿಚಾರಣೆಗೆ ಮುಹೂರ್ತ ಫಿಕ್ಸ್
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಾಕ್ಷಿಗಳ ವಿಚಾರಣೆ ನಡೆಸಲು ಮುಂದಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಸಚಿನ್ ಅವರು ಒಟ್ಟು 250ಕ್ಕೂ ಅಧಿಕ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಎಫ್‌ಎಸ್‌ಎಲ್ ತಜ್ಞರು, ಪ್ರತ್ಯಕ್ಷ ಸಾಕ್ಷಿಗಳು ಹಾಗೂ ತಾಂತ್ರಿಕ ಸಾಕ್ಷಿಗಳ ವಿವರಗಳಿವೆ. ನ್ಯಾಯಾಲಯವು ಡಿಸೆಂಬರ್ 17ರಿಂದ ಸಾಕ್ಷ್ಯಗಳ ವಿಚಾರಣೆಯನ್ನು ಆರಂಭಿಸಲು ತೀರ್ಮಾನಿಸಿದ್ದು, ಅಂದೇ ಸಾಕ್ಷಿ ಸಂಖ್ಯೆ 7 ಮತ್ತು 8ಕ್ಕೆ ಸಮನ್ಸ್ ನೀಡಲಾಗಿದೆ. ವಿಶೇಷವೆಂದರೆ, ಅದೇ ದಿನ ರೇಣುಕಾಸ್ವಾಮಿ ಅವರ ಪೋಷಕರಿಗೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಕಳೆಗುಂದಿದ ದರ್ಶನ್, ಮೌನವೇ ಉತ್ತರ
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ತೀರಾ ಮಂಕಾಗಿ ಕಂಡುಬಂದರು. ವಿಚಾರಣೆಯುದ್ದಕ್ಕೂ ಮೌನಕ್ಕೆ ಶರಣಾಗಿದ್ದ ದರ್ಶನ್, ನ್ಯಾಯಾಲಯದ ಕಲಾಪವನ್ನು ಗಮನಿಸುತ್ತಾ ಸುಮ್ಮನೆ ಕುಳಿತಿದ್ದರು ಎಂದು ವರದಿಯಾಗಿದೆ. ಜೈಲುವಾಸದ ಬಳಿಕ ದರ್ಶನ್ ಅವರಲ್ಲಿನ ಉಲ್ಲಾಸ ಮಾಯವಾಗಿದ್ದು, ಡಲ್ಲಾಗಿ ಕಾಣಿಸಿಕೊಂಡರು.
ಜೈಲು ಬದಲಾವಣೆ ಅರ್ಜಿ ವಜಾ, ಟಿವಿಗೆ ಸಿಕ್ತು ಒಪ್ಪಿಗೆ
ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಕೆಲವೊಂದು ಮನವಿಗಳನ್ನು ನ್ಯಾಯಾಲಯದ ಮುಂದಿಟ್ಟರು. ಆರೋಪಿ ಜಗದೀಶ್ ತನ್ನನ್ನು ಚಿತ್ರದುರ್ಗದ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದನು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ನೇರವಾಗಿ ವಜಾಗೊಳಿಸಿದೆ. ಅಂತೆಯೇ ಮತ್ತೊಬ್ಬ ಆರೋಪಿ ಅನುಕುಮಾರ್, ತನ್ನ ತಾಯಿಯ ಅನಾರೋಗ್ಯದ ಕಾರಣ ನೀಡಿ ಚಿತ್ರದುರ್ಗ ಜೈಲಿಗೆ ಸ್ಥಳಾಂತರಿಸುವಂತೆ ಕೋರಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರಕರಣದ ಐ ವಿಟ್ನೆಸ್ ಅಥವಾ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೂ ಆರೋಪಿಗಳ ಜೈಲು ಬದಲಾವಣೆ ಸಾಧ್ಯವಿಲ್ಲ ಎಂದು ಖಡಕ್ ಆಗಿ ತಿಳಿಸಿದರು.
ಆದರೆ, ಆರೋಪಿ ಲಕ್ಷ್ಮಣ್ ಸಲ್ಲಿಸಿದ್ದ ವಿಭಿನ್ನ ಮನವಿಯೊಂದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿದೆ. ಜೈಲಿನ ಕೋಣೆಯಲ್ಲಿ ತನಗೆ ಟಿವಿ ವ್ಯವಸ್ಥೆ ಬೇಕು ಎಂದು ಲಕ್ಷ್ಮಣ್ ಕೋರಿದ್ದನು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ಜೈಲು ನಿಯಮಾವಳಿಗಳ ಅನ್ವಯ ಟಿವಿ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿಸೆಂಬರ್ 17 ರಂದು ನಡೆಯಲಿರುವ ವಿಚಾರಣೆ ಪ್ರಕರಣದ ಗತಿಯನ್ನೇ ಬದಲಿಸುವ ಸಾಧ್ಯತೆಯಿದೆ.








