ಚಂದನವನದ ಕುಳ್ಳ, ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ದ್ವಾರಕೀಶ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಅವರ ಸಾವನ್ನು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ದ್ವಾರಕೀಶ ಚಂದನವನದ ಬಹುತೇಕ ದಿಗ್ಗಜರೊಂದಿಗೆ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.
1942ರಲ್ಲಿ ನಟಿಸಿರುವ ದ್ವಾರಕೀಶ್ ಅವರ ಮೂಲ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ. ನಿರ್ದೇಶಕ ಸಿವಿ ಶಿವಶಂಕರ್ ಅವರು ದ್ವಾರಕೀಶ್ ಎನ್ನುವ ಹೆಸರನ್ನು ಅವರಿಗೆ ನೀಡಿದ್ದರು. 1964ರಲ್ಲಿ ಬಿಡುಗಡೆ ಆದ ‘ವೀರ ಸಂಕಲ್ಪ’ ಅವರ ಮೊದಲ ಚಿತ್ರವಾಗಿತ್ತು. ಹುಣಸೂರು ಕೃಷ್ಣಮೂರ್ತಿ ಈ ಸಿನಿಮಾದ ನಿರ್ದೇಶಕರು. ತಮ್ಮ ಮೊದಲ ಸಿನಿಮಾದಲ್ಲಿ ಅವರು ಮುಖ್ಯಭೂಮಿಕೆಯಲ್ಲಿಯೇ ಎಂಟ್ರಿ ಕೊಟ್ಟಿದ್ದರು.
ಆನಂತರ 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡರು. ಆಂತರ ನೂರಾರು ಸಿನಿಮಾಗಳಿಗೆ ದ್ವಾರಕೀಶ್ ಬಂಡವಾಳ ಹೂಡಿದರು. ಡಾ. ರಾಜ್ ಕುಮಾರ್ ನಟನೆಯ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.
‘ಪ್ರಚಂಡ ಕುಳ್ಳ’,‘ಕಳ್ಳ ಕುಳ್ಳ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡವು. ‘ಭಾಗ್ಯವಂತರು’, ‘ಕಿಟ್ಟು ಪುಟ್ಟು’, ‘ಕುಳ್ಳ ಕುಳ್ಳಿ’, ‘ಗುರು ಶಿಷ್ಯರು’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ರಿಲೀಸ್ ಆದ ‘ಆಯುಷ್ಮಾನ್ಭವ’ ಅವರ ನಿರ್ಮಾಣದ ಕೊನೆಯ ಸಿನಿಮಾ ಆಗಿದೆ. ನೀ ಬರೆದ ಕಾದಂಬರಿ ದ್ವಾರಕೀಶ್ ಅವರ ಮೊದಲ ನಿರ್ದೇಶನದ ಸಿನಿಮಾ. ಆನಂತರ ‘ಆಫ್ರಿಕಾದಲ್ಲಿ ಶೀಲಾ’, ‘ಕಿಲಾಡಿಗಳು’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 2001ರ ನಂತರ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿರಲಿಲ್ಲ. ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಇಡೀ ಚಂದನವನ ಕಂಬನಿ ಮಿಡಿಯುತ್ತಿದೆ.