ಪ್ರಚಾರದ ರಾಯಭಾರಿ.. ನಗುವಿನ ಸಾಹುಕಾರ ನಮ್ಮ ಪ್ರೀತಿಯ ಅಪ್ಪು..!
ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಗ್ದತೆ, ಸರಳತೆ, ಮಾನವೀಯತೆ, ವಿಧೇಯತೆ, ನಗುವಿನ ಆತ್ಮೀಯತೆ ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ.
ಹೌದು, ಪುನೀತ್ ರಾಜ್ ಕುಮಾರ್, ಡಾ. ರಾಜ್ ಕುಮಾರ್ ಅವರ ಮಗ.. ನಟ, ಕಲಾವಿದ ಎಂಬುದು ಅವರ ವೈಯಕ್ತಿಕ ಜೀವನದ ಟ್ಯಾಗ್ ಲೈನ್. ತಂದೆಯ ಹಾದಿಯಲ್ಲೇ ಮುನ್ನಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಹಲವು ಸಾಮಾಜಿಕ ಕಳಕಳಿಯ ಮೂಲಕ ಕರುನಾಡಿನ ಜನಮನವನ್ನು ಗೆದ್ದಿದ್ದರು. ಬಾಲ ನಟನಾಗಿ ಆರು ತಿಂಗಳ ಮಗುವಾಗಿದ್ದಲೇ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಆದಾದ ನಂತರ 13 ವರ್ಷಗಳ ತನಕ ಬಾಲನಟನಾಗಿ ಕಾಣಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ತನ್ನ 10ನೇ ವರ್ಷದಲ್ಲೇ ರಾಷ್ಟ್ರ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ನಂತರ ಪುನೀತ್ ಗೆ ಯಾಕೋ ಬಣ್ಣದ ಬದುಕು ಇಷ್ಟವಾಗಲಿಲ್ಲ. ಹೀಗಾಗಿ ವ್ಯವಹಾರದ ಕಡೆ ಗಮನ ಹರಿಸಿದ್ದರು. ಆದ್ರೆ ಅಲ್ಲೂ ಕೂಡ ಪುನೀತ್ ಯಶ ಕಾಣಲಿಲ್ಲ. ಆಗ ಮತ್ತೆ ಕೈ ಹಿಡಿದಿದ್ದು ಇದೇ ಬಣ್ಣದ ಲೋಕ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ವರ್ಷಕ್ಕೊಂದು ಸಿನಿಮಾದಲ್ಲಿ ನಟಿಸುತ್ತಲೇ ಕಳೆದ 18 ವರ್ಷಗಳಲ್ಲಿ 29 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ 30ನೇ ಸಿನಿಮಾ ತೆರೆ ಕಾಣುವ ಹಂತದಲ್ಲಿದೆ. ಆದ್ರೆ ಈಗ ಪುನೀತ್ ರಾಜ್ ಕುಮಾರ್ ಅವರೇ ಇಲ್ಲ.
ಅನಾಧ ಆಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳ ಶಿಕ್ಷಣ, ಗೋ ಶಾಲೆ, ಬಡ ಮಕ್ಕಳ ಶಿಕ್ಷಣ ಹೀಗೆ ಅನೇಕ ಸಂಘ ಸಂಸ್ಥೆಗಳ ಆಶ್ರಯದಾತನಾಗಿರುವ ಹೃದಯವಂತ ನಮ್ಮ ಪುನೀತ್ ರಾಜ್ ಕುಮಾರ್.
ಚಿತ್ರಗಳಲ್ಲಿ ಹಾಡಿರುವ ಹಾಡುಗಳ ಸಂಭಾವಣೆ, ಜಾಹಿರಾತುಗಳಲ್ಲಿ ನಟಿಸುವ ಸಂಭಾವಣೆಯ ಅರ್ಧದಷ್ಟು ಹಣವನ್ನು ದಾನ ಧರ್ಮಕ್ಕೆ ಮೀಸಲಾಗಿಡುವುದು ಪುನೀತ್ ರಾಜ್ ಕುಮಾರ್ ಧರ್ಮವಾಗಿಬಿಟ್ಟಿತ್ತು. ಇನ್ನು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತ ಜಾಹಿರಾತುಗಳಲ್ಲಿ ನಟಿಸಿದ್ರೆ ಅಪ್ಪು ಒಂದು ರೂಪಾಯಿ ಕೂಡ ಸಂಭಾವಣೆ ಪಡೆದುಕೊಳ್ಳುವುದಿಲ್ಲ. ಇದು ಪುನೀತ್ ರಾಜ್ ಕುಮಾರ್ ಅವರಿಗೆ ಅವರ ತಂದೆಯಿಂದ ಬಂದಂತಹ ಬಳುವಳಿ.
ಅಂದ ಹಾಗೇ ಪುನೀತ್ ರಾಜ್ ಕುಮಾರ್ ಸುಮಾರು ಹತ್ತಕ್ಕೂ ಹೆಚ್ಚು ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ನಂದಿನಿ ಉತ್ಪನ್ನಗಳು, ಎಲ್‍ಇಡಿ ಬಲ್ಬ್ ಗಳ ಬಳಕೆ, ಕೊರೋನಾ ಲಸಿಕೆ ಅಭಿಯಾನ, ಬಿಎಮ್‍ಟಿಸಿ ಬಸ್ ಪಥದ ಅಭಿಯಾನ, ಚೆಲುವ ಚಾಮರಾಜನಗರ, ಪ್ರವಾಸೋಧ್ಯಮ, ಕೌಶಲ ಕರ್ನಾಟಕದ ಅಭಿಯಾನ, ಸಿಡಾಕ್ ತರಬೇತಿಯ ಅಭಿಯಾನ, ಗ್ರಾಮೀನ ಯುವಕರಿಗೆ ಐಟಿಐ ಸೇರುವಂತೆ ಉತ್ತೇಜನ, ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಭಿಯಾನ, ಸ್ತ್ರೀ ಶಕ್ತಿ ಸ್ವ ಸಹಾಯದ ದೀಪ ಸಂಜೀವಿನಿ ಕಾರ್ಯಕ್ರಮ, ಸಂಜೀವಿನ ಯೋಜನೆ ಹೀಗೆ ಅನೇಕ ಸರ್ಕಾರದ ಜನ ಪರ ಕಾರ್ಯಕ್ರಮಗಳಿಗೆ ಕರ್ನಾಟಕದ ಯುವರತ್ನ ಪ್ರಚಾರದ ರಾಯಭಾರಿಯಾಗಿದ್ದರು.
ಇನ್ನು ಪುನೀತ್ ರಾಜ್ ಕುಮಾರ್ ಹಲವಾರು ಕಂಪೆನಿಗಳಿಗ ಪ್ರಚಾರದ ರಾಯಭಾರಿ ಕೂಡ ಆಗಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ಪುನೀತ್, ಎಲ್ಲರು ಬದುಕಿನಲ್ಲಿ ಯಶಸ್ಸು, ಸಾಧನೆ ಮಾಡಬೇಕು ಎಂಬ ಧೈಯವನ್ನು ಇಟ್ಟುಕೊಂಡಿದ್ದರು. ಹೀಗೆ ಒಳ್ಳೆಯ ಮನಸ್ಸಿನ ಹೃದಯವಂತ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ.









