ಕೇಂದ್ರದ ವಿರುದ್ಧ ಮಾತನಾಡಿದ ಸಿದ್ಧಾರ್ಥ್‍ಗೆ ಜೀವ ಬೆದರಿಕೆ
ಚೆನ್ನೈ : ತಮಿಳು ನಟ ಸಿದ್ಧಾರ್ಥ್ ಕೆಲ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಆದ್ರೆ ಇದೀಗ ಅವರಿಗೆ ಬಿಜೆಪಿ ಐಟಿ ಸೆಲ್ ಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು,ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಸಿದ್ಧಾರ್ಥ್ ತಮ್ಮ ಟ್ವೀಟ್ ನಲ್ಲಿ ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್ ನವರು ನನ್ನ ಫೋನ್ ನಂಬರ್ ಲೀಕ್ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ.

ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಬಿಜೆಪಿಯ ಲಿಂಕ್ ಹಾಗೂ ಡಿಪಿಗಳೊಂದಿಗೆ ಎಲ್ಲ ನಂಬರ್ ಗಳನ್ನು ದಾಖಲಿಸಿದ್ದೇನೆ ಹಾಗೂ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸುಮ್ಮನಿರುವುದಿಲ್ಲ, ಪ್ರಯತ್ನಿಸುತ್ತಲೇ ಇರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನಾವು ಕೋವಿಡ್ ನಿಂದ ಬದುಕಬಹುದು, ಇಂತಹ ಜನರಿಂದ ನಾವು ಉಳಿಯಲು ಸಾಧ್ಯವೇ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಸಿದ್ಧಾರ್ಥ್ ಅವರ ಈ ಟ್ವೀಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಪ್ ದಿ ಟೌನ್ ಆಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.









