ಜನೋಪಕಾರ ಮಾಡಲು ತಮ್ಮ ಫ್ಲ್ಯಾಟ್ಸ್ ಗಳನ್ನು ಅಡವು ಇಟ್ಟ ನಟ ಸೋನು ಸೂದ್
ಮುಂಬೈ, ಡಿಸೆಂಬರ್09: ರೀಲ್ ಜಗತ್ತಿನ ರಿಯಲ್ ಹೀರೋ ಸೋನು ಸೂದ್ ತಮ್ಮ ಎಂಟು ಜುಹು ಫ್ಲ್ಯಾಟ್ಸ್ಗಗಳನ್ನು 10 ಕೋಟಿ ರೂಪಾಯಿಗಳ ಸಾಲಕ್ಕೆ ಅಡವು ಇಟ್ಟಿದ್ದು, ಅದರಿಂದ ಅಗತ್ಯವಿರುವವರಿಗೆ ಸಹಾಯ ಮಾಡಲು ಬಯಸಿದ್ದಾರೆ. ಈ ವರ್ಷದ ಆರಂಭದಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಸಂಕಷ್ಟಕ್ಕೆ ಸಿಲುಕಿದ ನೂರಾರು ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸೂದ್ ಸಹಾಯ ಮಾಡಿದ್ದರು.
ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಮಾಡಲು ಅವರು ಲಾಕ್ ಡೌನ್ ಸಮಯದಲ್ಲಿ ಇತರ ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸೋನು ಸೂದ್ ಅವರ ಜನಸೇವೆ ಜನರ ಪ್ರಶಂಸೆಗೆ ಪಾತ್ರವಾಗಿತ್ತು.
ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿರುವ ಸೋನು ಸೂದ್ ಅದಕ್ಕಾಗಿ ಈಗ ತಮ್ಮ ಸ್ವಂತ ಆಸ್ತಿಗಳನ್ನು ಅಡವು ಇಟ್ಟಿದ್ದಾರೆ.
ತಮ್ಮ ಯೋಜನೆಯಂತೆ ಜನೋಪಕಾರ ಮಾಡಲು 10 ಕೋಟಿ ರೂಗಳ ಅಗತ್ಯ ಇರುವುದನ್ನು ಮನಗಂಡಿರುವ ಅವರು ಜುಹುನ ಶಿವ್ ಸಾಗರ್ ಸಿಜಿಎಚ್ಎಸ್ನಲ್ಲಿ ಇರುವ ತಮ್ಮ ಎರಡು ಶಾಪ್, 8 ಫ್ಲ್ಯಾಟ್ಸ್ , ಮುಂಬೈ ಇಸ್ಕಾನ್ ದೇವಸ್ಥಾನದ ಬಳಿಯ ಕಟ್ಟಡ ಇತ್ಯಾದಿಗಳನ್ನು ಸ್ಟ್ಯಾಂಡರ್ಡ್ ಚಾಟರ್ಡ್ ಬ್ಯಾಂಕ್ನಲ್ಲಿ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕಟ್ಟಡ ಸಂಕೀರ್ಣವು ಮುಂಬೈನ ಇಸ್ಕಾನ್ ದೇವಾಲಯದ ಸಮೀಪ ಎಬಿ ನಾಯರ್ ರಸ್ತೆಯಲ್ಲಿದೆ ಎಂದು ನೋಂದಣಿ ದಾಖಲೆಗಳಿಂದ ತಿಳಿದು ಬಂದಿದೆ. ಪ್ರಸ್ತಾಪಿಸಲಾದ ಆಸ್ತಿಗಳನ್ನು ಸೋನು ಸೂದ್ ಮತ್ತು ಅವರ ಪತ್ನಿ ಸೋನಾಲಿ ಜಂಟಿಯಾಗಿ ಹೊಂದಿದ್ದಾರೆ.
ಸಾಲವನ್ನು ನೀಡಲು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಒಪ್ಪಿದ್ದು, ಸಾಲ ಒಪ್ಪಂದಕ್ಕೆ ಸೆಪ್ಟೆಂಬರ್ 15 ರಂದು ಸಹಿ ಹಾಕಲಾಗಿದೆ ಮತ್ತು ಅಧಿಕೃತವಾಗಿ ನವೆಂಬರ್ 24 ರಂದು ನೋಂದಾಯಿಸಲಾಗಿದೆ. ದಾಖಲೆಗಳ ಪ್ರಕಾರ, 10 ಕೋಟಿ ರೂ.ಗಳ ಸಾಲವನ್ನು ಸಂಗ್ರಹಿಸಲು 5 ಲಕ್ಷ ರೂ.ಗಳ ನೋಂದಣಿ ಶುಲ್ಕವನ್ನು ಸಲ್ಲಿಸಲಾಗಿದೆ.