ನಟ ಸುಶಾಂತ್ ಸಿಂಗ್ ಅವರ ಸಾವು ಆತ್ಮಹತ್ಯೆ ಅಲ್ಲ.. ಇದೊಂದು ಕೊಲೆ ??
ಮುಂಬೈ, ಜೂನ್ 15: ಎಂಎಸ್. ಧೋನಿ ಖ್ಯಾತಿಯ ಬಾಲಿವುಡ್‌ನ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈನ ಅವರ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮನೆಯ ಕೆಲಸದವರ ಗಮನಕ್ಕೆ ಇದು ಮೊದಲು ಬಂದಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾಗಿ ಏನು ಕಾರಣ ಎಂದು ಇನ್ನೂ ತಿಳಿದಿಲ್ಲವಾದರೂ, ಪ್ರಾಥಮಿಕ ವರದಿಗಳು ಸುಶಾಂತ್ ಮಾನಸಿಕ ಒತ್ತಡ(ಡಿಪ್ರೆಶನ್)ದಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿಸಿದೆ.

ಈ ಮಧ್ಯೆ ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ನಾಲ್ಕು ದಿನದ ಮೊದಲು ರಿಯಾ ಅಪಾರ್ಟ್ ಮೆಂಟ್ ನಿಂದ ಹೊರನಡೆದಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ರಿಯಾ ಚಕ್ರವರ್ತಿ 2013ರಲ್ಲಿ ಬಿಡುಗಡೆಯಾದ ಬಾಲಿವುಡ್ ನ ಮೇರೆ ಡ್ಯಾಡಿ ಕಿ ಮಾರುತಿ ಸಿನಿಮಾದಲ್ಲಿ ನಟಿಸಿದ್ದರು.
ಬೆಂಗಳೂರಿನಲ್ಲಿ ಜನಿಸಿದ್ದ ಬಂಗಾಳಿ ಕುಟುಂಬದ ರಿಯಾ ಅಂಬಾಲಾ ಕಂಟೋನ್ಮೆಂಟ್ ನ ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು.
ಈ ಹಿಂದೆ ಮಾಧ್ಯಮಗಳು ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ನಡುವೆ ಲವ್ ಅಫೇರ್ ಇದೆ ಎಂಬ ಸುದ್ದಿ ವರದಿ ಮಾಡಿದ್ದವು ಮತ್ತು ಸುಶಾಂತ್ ಕೂಡಾ ರಿಯಾಳ ಸುಂದರವಾದ ಫೋಟೋವನ್ನು ಇನ್ಸ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಅಷ್ಟೇ ಅಲ್ಲ ಆ ಫೋಟೋಗೆ “ಮೇರಿ ಜಿಲೇಬಿ@ರಿಯಾಚಕ್ರವರ್ತಿ” ಎಂಬ ಕ್ಯಾಪ್ಶನ್ ನೀಡುವ ಮೂಲಕ ತಮ್ಮ ಲವ್ ಅಫೇರ್ ಅನ್ನು ಪರೋಕ್ಷವಾಗಿ ತಿಳಿಸಿದ್ದರು.

ಉನ್ನತ ಮಟ್ಟದ ವರದಿಗಳು ತಿಳಿಸಿರುವ ಪ್ರಕಾರ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ನಾಲ್ಕು ದಿನದ ಮುನ್ನ ರಿಯಾ ಅಪಾರ್ಟ್ ಮೆಂಟ್ ನಿಂದ ಹೊರನಡೆದಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ರಿಯಾ ಅಪಾರ್ಟ್‌ಮೆಂಟ್ ನಿಂದ ಹೊರನಡೆದಿರಬಹುದು ಮತ್ತು ಇದರಿಂದಾಗಿ ಸುಶಾಂತ್ ಮಾನಸಿಕ ಒತ್ತಡಕ್ಕೆ ಒಳಗಾಗಿರಬೇಕೆಂದು ಹೇಳಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.
ಟಿವಿ ಸೀರಿಯಲ್ ಮೂಲಕ ವೃತ್ತಿ ಆರಂಭಿಸಿದ್ದ ಸುಶಾಂತ್ ಸಿಂಗ್ ಎಂಎಸ್ ಧೋನಿ, ಕೇದಾರನಾಥ್, ಪಿಕೆ, ಶುದ್ಧ್ ದೇಸಿ ರೋಮ್ಯಾನ್ಸ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ರ ನಿಧನಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿಯುತ್ತಿದೆ.
ಸುಶಾಂತ್ ಸಿಂಗ್ ಅವರ ಚಿಕ್ಕಪ್ಪ ಆರ್.ಸಿ. ಸಿಂಗ್ ಅವರು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ. ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದು, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.








