ತಿರುವನಂತಪುರಂ, ಮೇ 17 : ಮಲೆಯಾಳಂ ನ ಖ್ಯಾತ ಸೀರಿಯಲ್ ನಟಿ ಮಂಜು ಸಿನಿ ಕಳ್ಳಭಟ್ಟಿ ದಂಧೆಯಿಂದಾಗಿ ಜೈಲು ಪಾಲಾಗಿದ್ದಾಳೆ. ತನ್ನ 4ನೇ ಗಂಡ ವಿಶಾಖ ಜೊತೆ ಈಕೆ ಕಳ್ಳಭಟ್ಟಿ ದಂಧೆ ನಡೆಸಿದ್ದು, ವಿಚಾರ ತಿಳಿದ ಕೇರಳದ ಪೊಲೀಸರು ನಟಿ ಮತ್ತು ಆಕೆಯ ನಾಲ್ಕನೇ ಗಂಡನನ್ನು ಬಂಧಿಸಿದ್ದಾರೆ. ಮಂಜು ಸಿನಿ (42 ವರ್ಷ) ಮತ್ತು ಆಕೆಯ ಗಂಡ ವಿಶಾಖ (28 ವರ್ಷ) ಸುಮಾರು ಒಂದೂವರೆ ತಿಂಗಳಿನಲ್ಲಿ ಸಾವಿರಾರು ಲೀಟರ್ ಕಳ್ಳಬಟ್ಟಿ ಸಾರಾಯಿ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.
ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಂಧೆ ನಡೆಸುತ್ತಿದ್ದ ಇವರಿಬ್ಬರನ್ನು ಬಂಧಿಸಿದ್ದು, 400 ಲೀಟರ್ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸುತ್ತಿದ್ದ ದ್ರವವನ್ನು ವಶಪಡಿಸಿಕೊಂಡಿದ್ದಾರೆ. ಬಟ್ಟೆ ಶುಚಿ ಮಾಡಲು ಬಳಸುತ್ತಿದ್ದ ಸೋಪ್ ಆಯಿಲ್ ಮತ್ತು ತಾಜ್ಯಗಳನ್ನು ಬಳಸಿ ಕೊಂಡು ಇವರಿಬ್ಬರು ಕಳ್ಳಬಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿಶಾಖ ಎರಡು ವರ್ಷಗಳ ಹಿಂದೆ ಕೊಲೆ ಕೇಸಿನ ಹಿನ್ನೆಲೆಯಲ್ಲಿ ಬಂಧಿತನಾಗಿದ್ದು, ಜೈಲಿನಿಂದ ಹೊರಬಂದ ಬಳಿಕ ಮಂಜು ಜೊತೆ ಸೇರಿ ಬಟ್ಟಿ ಸಾರಾಯಿ ದಂಧೆಯನ್ನು ಪ್ರಾರಂಭಿಸಿದ್ದನು ಎಂದು ತಿಳಿದುಬಂದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದ ಕಾರಣ ಕಳ್ಳಬಟ್ಟಿಗೆ ಹೆಚ್ಚಿನ ಬೇಡಿಕೆ ಇದ್ದು, ಲಕ್ಷಾಂತರ ಹಣ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.








